ಬೆಳ್ತಂಗಡಿ: ವ್ಯಕ್ತಿಯೋರ್ವ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ರಸ್ತೆಗೆಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಘಟನೆ ಕಾಜೂರು ದಿಡುಪೆ ಸಂಸೆ ರಸ್ತೆಯ ಹೇಡ್ಯ ಸೊಸೈಟಿ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಮೃತ ಸವಾರರನ್ನು ರಘು ಎಂದು ಗುರುತಿಸಲಾಗಿದೆ.
ಘಟನೆಯ ವಿವರ
ನಿನ್ನೆ ತಡರಾತ್ರಿ 11ಗಂಟೆಗೆ ಬೈ ಹುಲ್ಲು ಸಾಗಾಟದ ಪಿಕಪ್ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿತ್ತು.
ಪರಿಣಾಮ ಐದು ವಿದ್ಯುತ್ ಕಂಬಗಳು ತುಂಡಾಗಿ ಅದರ ತಂತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು.
ಇದರ ಅರಿವಿಲ್ಲದ ರಘು ತನ್ನ ದ್ವಿಚಕ್ರ ವಾಹನದಲ್ಲಿ ದಿಡುಪೆ ಕಡೆಯಿಂದ ಸಾಗುತ್ತಿದ್ದಾಗ ರಾತ್ರಿ 11.20ರ ವೇಳೆಗೆ ಹೇಡ್ಯ ಸೊಸೈಟಿ ಬಳಿ ರಘು ಅವರ ಕುತ್ತಿಗೆಗೆ ತಂತಿಗಳು ಸಿಕ್ಕಿಕೊಂಡು ರಸ್ತೆಗೆಸೆಯಲ್ಪಟ್ಟಿದ್ದಾರೆ.
ಘಟನೆಯ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡ ರಘು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ವೇಳೆ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.