Friday, May 27, 2022

ಅಫ್ಘಾನಿಸ್ತಾನದಲ್ಲಿ ಅಮೇರಿಕನ್‌ ಯೋಧರ ಕೈಗಿತ್ತ ಮಗು ಎಲ್ಲಿದೆ?

ನ್ಯೂಯಾರ್ಕ್‌: ಮೂರು ತಿಂಗಳ ಹಿಂದೆ ಈ ಮೇಲಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಅಪಘಾನಿಸ್ತಾನವನ್ನು ತಾಲಿಬಾನ್‌ ಉಗ್ರರು ವಶಪಡಿಸಿಕೊಳ್ಳುವ ವೇಳೆ ಸ್ಥಳೀಯರು ಜೀವದ ಹಂಗು ತೊರೆದು ದೇಶ ತೊರೆಯಲು ಮುಂದಾಗಿದ್ದರು.

ಈ ವೇಳೆ ಸುರಕ್ಷತೆಗಾಗಿ ಅಮೆರಿಕದ ಯೋಧರ ಕೈಗೆ ಹಸ್ತಾಂತರಿಸಲಾಗಿತ್ತು. ಎರಡು ತಿಂಗಳ ಮಗು ಇನ್ನೂ ಪತ್ತೆಯಾಗದೆ ಹೆತ್ತವರು ಸಂಕಷ್ಟ ಪಡುತ್ತಿದ್ದಾರೆ.
ಅದು ಕಾಬೂಲಿನಲ್ಲಿಯ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ 10 ವರ್ಷಗಳ ಕಾಲ ದುಡಿದಿದ್ದ ಮಿರ್ಝಾ ಅಲಿ ಮತ್ತು ಪತ್ನಿ ಸುರೈಯಾ ಅವರು ಕ್ಷಣಮಾತ್ರದಲ್ಲಿ ಕೈಗೊಂಡ ನಿರ್ಧಾರವಾಗಿತ್ತು.
ಆ.19ರಂದು ದೇಶ ಬಿಡಲು ವಿಮಾನ ನಿಲ್ದಾಣದ ಪ್ರವೇಶದ್ವಾರದ ಮುಂದೆ ನೆರೆದಿದ್ದ ಜನರ ದೊಡ್ಡ ಗುಂಪಿನ ನಡುವೆ ಅಲಿ ದಂಪತಿ ತಮ್ಮ ಐವರು ಮಕ್ಕಳೊಂದಿಗೆ ಸಿಕ್ಕಿಹಾಕಿಕೊಂಡಿದ್ದರು.

ಈ ವೇಳೆ ನಿಲ್ದಾಣದ ಎತ್ತರದ ಆವರಣ ಗೋಡೆಯಾಚೆಯಿದ್ದ ಅಮೆರಿಕದ ಯೋಧನೋರ್ವ ಏನಾದರೂ ನೆರವು ಬೇಕೇ ಎಂದು ಅವರನ್ನು ವಿಚಾರಿಸಿದ್ದ.


ನೂಕುನುಗ್ಗಲಿನಲ್ಲಿ ತಮ್ಮ ಎರಡು ತಿಂಗಳು ಪ್ರಾಯದ ಸುಹೈಲ್‌ ಅನ್ನು ಅಲಿ ದಂಪತಿ ಮಗು ವನ್ನು ಯೋಧನ ಕೈಗೆ ನೀಡಿದ್ದರು.

ಪ್ರವೇಶದ್ವಾರ ಕೇವಲ ಐದು ಮೀಟರ್ ಅಂತರದಲ್ಲಿದ್ದುದರಿಂದ ಬೇಗನೆ ತಾವು ಒಳಪ್ರವೇಶಿಸುತ್ತೇವೆ ಎಂದವರು ಭಾವಿಸಿದ್ದರು.

ಇದೇ ವೇಳೆ ತಾಲಿಬಾನಿಗಳು ಜನರನ್ನು ಹಿಂದಕ್ಕೆ ತಳ್ಳಲಾರಂಭಿಸಿದ್ದರು. ಹೀಗಾಗಿ ತಮ್ಮ ಉಳಿದ ಮಕ್ಕಳೊಂದಿಗೆ ನಿಲ್ದಾಣದೊಳಗೆ ಪ್ರವೇಶಿಸಲು ದಂಪತಿಗೆ ಅರ್ಧ ಗಂಟೆ ಹಿಡಿದಿತ್ತು.

ಆದರೆ ಆ ವೇಳೆಗೆ ಸುಹೈಲ್ ಅಲ್ಲೆಲ್ಲಿಯೂ ಇರಲಿಲ್ಲ. ಹತಾಶ ಅಲಿ ನಿಲ್ದಾಣದೊಳಗೆ ಎದುರಾಗಿದ್ದ ಪ್ರತಿ ಅಧಿಕಾರಿಯನ್ನೂ ತನ್ನ ಮಗುವಿನ ಬಗ್ಗೆ ವಿಚಾರಿಸಿದ್ದರು.

ವಿಮಾನ ನಿಲ್ದಾಣವು ಮಕ್ಕಳ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿದ್ದು ಮಗುವನ್ನು ಮಕ್ಕಳಿಗಾಗಿಯೇ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಜಾಗಕ್ಕೆ ಕರೆದೊಯ್ದಿರಬೇಕು ಎಂದು ಅಲಿಗೆ ತಿಳಿಸಿದ್ದ ಅಮೆರಿಕದ ಮಿಲಿಟರಿ ಕಮಾಂಡರ್‌ನೋರ್ವ ದಂಪತಿಯನ್ನು ಅಲ್ಲಿಗೆ ಕರೆದೊಯ್ದಿದ್ದ.

ಆದರೆ ಆ ಜಾಗ ಖಾಲಿಯಾಗಿತ್ತು. ಕಮಾಂಡರ್ ಕೂಡ ಮಗುವನ್ನು ಹುಡುಕಿಕೊಂಡು ಅಲಿಯೊಂದಿಗೆ ಇಡೀ ವಿಮಾನ ನಿಲ್ದಾಣವನ್ನು ಸುತ್ತಾಡಿದ್ದ ಮೂರು ದಿನಗಳ ಕಾಲ ನಿರಂತರವಾಗಿ ದಂಪತಿ ಮಗುವಿಗಾಗಿ ಹುಡುಕಾಡುತ್ತಿದ್ದರು. ಇಲ್ಲಿ ಮಕ್ಕಳನ್ನು ಇಟ್ಟುಕೊಳ್ಳಲು ವ್ಯವಸ್ಥೆಯಿಲ್ಲ, ಹೀಗಾಗಿ ಮಗುವನ್ನು ವಿಮಾನದಲ್ಲಿ ಸಾಗಿಸಿರಬೇಕು ಎಂದು ಅಧಿಕಾರಿಯೋರ್ವ ಅಲಿಗೆ ತಿಳಿಸಿದ್ದ.

ಇಷ್ಟಾದ ಬಳಿಕ ಅಲಿ(35), ಸುರೈಯಾ (32) ಮತ್ತು 17, 9, 6 ಹಾಗೂ 3 ವರ್ಷ ಪ್ರಾಯದ ಅವರ ಮಕ್ಕಳನ್ನು ತೆರವು ವಿಮಾನವೊಂದರಲ್ಲಿ ಖತರ್‌ಗೆ ಮತ್ತು ನಂತರ ಜರ್ಮನಿಗೆ, ಅಂತಿಮವಾಗಿ ಅಮೆರಿಕಕ್ಕೆ ಸಾಗಿಸಲಾಗಿತ್ತು.

ಅಲ್ಲಿ ಕುಟುಂಬವೀಗ ಇತರ ಅಫ್ಘಾನ್ ನಿರಾಶ್ರಿತರೊಂದಿಗೆ ಟೆಕ್ಸಾಸ್‌ನ ಪೋರ್ಟ್ ಬ್ಲಿಸ್‌ನಲ್ಲಿ ಅಮೆರಿಕದಲ್ಲಿ ಎಲ್ಲಾದರೂ ಪುನರ್ವಸತಿಗಾಗಿ ಕಾಯುತ್ತಿದೆ. ಅಲ್ಲಿ ಅವರಿಗೆ ಯಾರೂ ಬಂಧುಗಳಿಲ್ಲ.
ಏರ್‌ಲಿಫ್ಟ್ ಸಂದರ್ಭದಲ್ಲಿ ಇತರ ಕೆಲವು ಕುಟುಂಬಗಳೂ ಮುಳ್ಳು ಬೇಲಿಯಾಚೆಯಿದ್ದ ಅಮೆರಿಕದ ಯೋಧರಿಗೆ ತಮ್ಮ ಮಕ್ಕಳನ್ನು ಹಸ್ತಾಂತರಿಸಿದ್ದವು.

ಅವರೆಲ್ಲ ತಮ್ಮ ಮಕ್ಕಳನ್ನು ವಾಪಸ್ ಪಡೆದುಕೊಂಡಿದ್ದಾರೆ. ಅಲಿ ತನಗೆದುರಾಗುವ ನೆರವು ಕಾರ್ಯಕರ್ತರು, ಅಮೆರಿಕದ ಅಧಿಕಾರಿಗಳ ಬಳಿ ಮಗುವಿನ ಬಗ್ಗೆ ವಿಚಾರಿಸುತ್ತಲೇ ಇದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಫ್ಘಾನ್ ನಿರಾಶ್ರಿತರ ಗುಂಪೊಂದು ಮಗುವನ್ನು ಯಾರಾದರೂ ಗುರುತಿಸಬಹುದು ಎಂಬ ಆಸೆಯಿಂದ ಸುಹೈಲ್ ಭಾವಚಿತ್ರವನ್ನು ಸಾಮಅಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics