ಮಂಗಳೂರು: ಯುದ್ಧಗ್ರಸ್ತ ಉಕ್ರೇನ್‌ನ ವಿನ್ನೆಸ್ಟಿಯಾ ನಗರದ ನ್ಯಾಶನಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ, ಮಂಗಳೂರು ಮೂಲದ ಬಿಜೈ ನ್ಯೂರೋಡ್ ನಿವಾಸಿ ಅನುಷಾ ಭಟ್ ಇಂದು ಮಂಗಳೂರಿಗೆ ಆಗಮಿಸಿದ್ದು, ಆಕೆಯನ್ನು ನೋಡುತ್ತಲೇ ಅಪ್ಪಿಕೊಂಡು ಪೋಷಕರು ಆನಂದ ಭಾಷ್ಪ ಸುರಿಸಿದ್ದಾರೆ.
ಏರ್‌ಲಿಫ್ಟ್ ಮಾಡಲಾಗಿದ್ದ ಅನುಷಾ ಭಟ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬಂದಿಳಿದರು. ಅವರನ್ನು ಪೋಷಕರು, ಕುಟುಂಬಿಕರು ಆತ್ಮೀಯವಾಗಿ ಬರಮಾಡಿದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು.
ಈ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅನುಷಾ ಭಟ್, “ಉಕ್ರೇನ್‌ನಲ್ಲಿ ನಾವಿದ್ದ ಸ್ಥಳದಿಂದ ಗಡಿ ದಾಟಲು ಏಜೆಂಟ್‌ಗಳ ಮೂಲಕ ಪಾಸ್‌ಗಳನ್ನು ಪಡೆದುಕೊಂಡಿದ್ದೆವು. ಆದರೆ ಯಾವ ಗಡಿಯನ್ನು ನಾವು ತಲುಪಲಿದ್ದೇವೆ ಎಂಬ ಅರಿವು ನಮಗಿರಲಿಲ್ಲ. ಪಾಸ್ ಪಡೆದು ನಾವು ಅಲ್ಲಿಂದ ರೊಮೇನಿಯಾದ ಗಡಿ ತಲುಪಿದ್ದೆವು.
ಅಲ್ಲಿ ನಾವು ಕೆಲಹೊತ್ತು ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು. ಅಲ್ಲಿ ಸರಕಾರಿ ಅಧಿಕಾರಿಗಳಾರೂ ಇರಲಿಲ್ಲ. ಅಲ್ಲಿದ್ದಿದ್ದು ಕೇವಲ ಯುಕ್ರೇನ್‌ನ ಸೇನಾ ಅಧಿಕಾರಿಗಳು. ರೊಮೇನಿಯಾದ ಗಡಿಯಲ್ಲಿ ವಲಸೆ ಕಚೇರಿಯನ್ನು ತಲುಪಿದಾಗ ಅಲ್ಲಿಂದ ನಮ್ಮನ್ನು ಆಶ್ರಯ ತಾಣವೊಂದಕ್ಕೆ ಕರೆದೊಯ್ಯಲಾಯಿತು.
ಅಲ್ಲಿ ಭಾರತ ಸರಕಾರ ನಮಗೆ ತಂಗಲು ವ್ಯವಸ್ಥೆ ಮಾಡಿದ್ದು, ಅಲ್ಲಿಂದ ನಮ್ಮನ್ನು ವಿಮಾನದ ಮೂಲಕ ಮುಂಬೈಗೆ ಕರೆತರಲಾಯಿತು. ಮುಂಬೈನಿಂದ ವಿಮಾನದ ವ್ಯವಸ್ಥೆ ಮಾಡಿಕೊಂಡು ಮಂಗಳೂರು ತಲುಪಿದ್ದೇನೆ.
ನಮ್ಮನ್ನು ಕರೆ ತಂದ ಪ್ರಧಾನಿ ಮೋದಿ ಸಹಿತ ಎಲ್ಲರಿಗೂ ಅಭಿನಂದನೆಗಳು’ ಉಕ್ರೇನ್‌ನಲ್ಲಿ ಲಕ್ಷೀತಾ ಎಂಬಾಕೆ ಉಳಿದುಕೊಂಡಿದ್ದು, ಅವಳೂ ಈಗ ಬಂದಿರುವ ಸಾಧ್ಯತೆ ಇದೆ” ಎಂದರು.