ಮಂಗಳೂರು ನಗರದ ಕೊಟ್ಟಾರದ ಪೃಥ್ವಿ ಅಪಾರ್ಟ್‌ಮೆಂಟ್ ಬಳಿಯ ಪಾಳು ಬಾವಿಗೆ ಬಿದ್ದಿದ್ದ ನಾಲ್ಕು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಪರಿಸರ ಪ್ರೇಮಿಗಳು ರಕ್ಷಿಸಿದ್ದಾರೆ.
ಮಂಗಳೂರು: ಮಂಗಳೂರು ನಗರದ ಕೊಟ್ಟಾರದ ಪೃಥ್ವಿ ಅಪಾರ್ಟ್‌ಮೆಂಟ್ ಬಳಿಯ ಪಾಳು ಬಾವಿಗೆ ಬಿದ್ದಿದ್ದ ನಾಲ್ಕು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಪರಿಸರ ಪ್ರೇಮಿಗಳು ರಕ್ಷಿಸಿದ್ದಾರೆ.
ಪಾಳು ಬಾವಿಯಲ್ಲಿ ಹೆಬ್ಬಾವುಗಳು ಬಿದ್ದಿರುವ ವಿಚಾರ ಸ್ಥಳೀಯರೊಬ್ಬರ ಗಮನಕ್ಕೆ ಬಂದಿದೆ. ಅವರು ಈ ಬಗ್ಗೆ ಮಂಗಳೂರಿನ ಪರಿಸರ ಪ್ರೇಮಿ ಭುವನ್ ದೇವಾಡಿಗ ಗಮನಕ್ಕೆ ತಂದಿದ್ದಾರೆ.
ತಕ್ಷಣ ಅವರು ಪರಿಸರ ಪ್ರೇಮಿ ಅಜಯ ಕುಲಾಲ್ ತಂಡದೊಂದಿಗೆ ರಾತ್ರೋರಾತ್ರಿ ಹೆಬ್ಬಾವುಗಳ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ.
ಏಣಿಯ ಸಹಾಯದಿಂದ ಬಾವಿಗಿಳಿದು ಜನರೇಟರ್‌ನಿಂದ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಿ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಸುಮಾರು 8.50 ಅಡಿ ಉದ್ದವಿರುವ 25ಕೆಜಿಗಿಂತಲೂ ಹೆಚ್ಚು ಭಾರವಿರುವ ಈ ಹೆಬ್ಬಾವುಗಳನ್ನು ಭಾರೀ ಪ್ರಯಸಪಟ್ಟು ಪಾಳು ಬಾವಿಯಿಂದ ಭುವನ್ ದೇವಾಡಿಗ, ಅಜಯ್ ಕುಲಾಲ್ ಹಾಗೂ ತಂಡ ರಕ್ಷಿಸಿದೆ.
ಬಳಿಕ ಈ ಹೆಬ್ಬಾವುಗಳನ್ನು ನಗರದ ಹೊರವಲಯದಲ್ಲಿರುವ ಅರಣ್ಯಕ್ಕೆ ಕೊಂಡೊಯ್ದು ಬಿಡಲಾಗಿದೆ. ಉರಗ ಪ್ರೇಮಿಗಳ ಈ ಕಾರ್ಯ ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ.