Saturday, August 20, 2022

ಮಂಗಳೂರಿನಿಂದ ಸಾಗಿಸುತ್ತಿದ್ದ ಅಡಕೆ ಸಹಿತ 2 ಲಾರಿಯೊಂದಿಗೆ ಪರಾರಿಯಾದ ಚಾಲಕರು

ಮಂಗಳೂರು: ಗುಜರಾತ್‌ನ ರಾಜ್‌ಕೋಟ್‌ಗೆ ಮಂಗಳೂರಿನಿಂದ ಸಾಗಾಟ ಮಾಡುತ್ತಿದ್ದ ಸುಮಾರು ಎರಡು ಕೋಟಿ ರೂ. ಮೌಲ್ಯದ ಅಡಕೆ ತುಂಬಿರುವ ಲಾರಿ ಸಹಿತ ನಾಲ್ವರು ಪರಾರಿಯಾಗಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಾರಿ ಚಾಲಕ ಬಾವೇಶ್ ಕೆ. ಷಾ, ಆಶೀಶ್ ಯಾದವ್, ಮಹಾರಾಷ್ಟ್ರ ನಾಸಿಕ್ ಜೋಶಿ ಟ್ರಾನ್ಸ್‌ಪೊರ್ಟ್ ಮಾಲಿಕರುಗಳಾದ ವಿಜಯ್ ಜೋಶಿ ಹಾಗೂ ಡ್ಯಾನಿಶ್ ವಿಜಯ್ ಜೋಶಿ ಪ್ರಕರಣದ ಆರೋಪಿಗಳೆಂದು ದೂರಲಾಗಿದೆ.

ಪ್ರಕರಣ ವಿವರ
ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಸಂಸ್ಥೆಯು ಭಟ್ಕಳ ಸೇರಿದಂತೆ ಇತರೆಡೆ ಅಡಿಕೆ ಹಾಗೂ ಇತರ ಕಾಡು ಉತ್ಪನ್ನಗಳನ್ನು ಖರೀದಿಸಿ ಹೊರರಾಜ್ಯಕ್ಕೆ ಕಳುಹಿಸುತ್ತಿರುವ ಉದ್ಯಮದಲ್ಲಿ ತೊಡಗಿಸಿಕೊಂಡಿದೆ. ಅದರಂತೆ ಜು.19ರಂದು ಬೋಳೂರಿನ ಜಯಲಕ್ಷ್ಮಿ ಟ್ರಾನ್ಸ್‌ಪೋರ್ಟ್ ಬುಕಿಂಗ್ ಆಫೀಸ್‌ನಿಂದ ಲಾರಿ ಗೊತ್ತುಪಡಿಸಿ ಗುಜರಾತ್​ನ ರಾಜ್‌ಕೋಟ್‌ನಲ್ಲಿರುವ ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಬ್ರಾಂಚ್ ಆಫೀಸಿಗೆ 291 ಚೀಲ ಅಡಿಕೆ ತುಂಬಿಸಿ ಕಳುಹಿಸಲಾಗಿತ್ತು.

ಮತ್ತೆ ಜು.20ರಂದು ಇನ್ನೊಂದು ಲಾರಿಯಲ್ಲಿ 301 ಚೀಲ ಅಡಕೆಯನ್ನು ಕಳುಹಿಸಲಾಗಿತ್ತು. ಈ ಎರಡೂ ಲಾರಿಗಳು ಜು.24ರಂದು ಗುಜರಾತ್ ರಾಜ್‌ಕೋಟ್​ನ ಬ್ರಾಂಚ್‌ಗೆ ತಲುಪಬೇಕಾಗಿತ್ತು. ಆದರೆ, ಅಲ್ಲಿಗೆ ತಲುಪದೇ ಲಾರಿ ಸಹಿತ ಈ ನಾಲ್ವರೂ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics