ಉಡುಪಿ: ಮನೆಯ ವಾಸ್ತವ್ಯ ವಿಚಾರಕ್ಕೆ ಸಂಬಂಧಿಸಿ ಸಹೋದರರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ಮಾ.16ರಂದು ಸಂಜೆ ನಡೆದಿದೆ.
ಕಂಬಳಕಟ್ಟ ನಿವಾಸಿ ಪಾಂಡು ನಾಯ್ಕ ಎಂಬವರ ಪುತ್ರ ಬಾಲಕೃಷ್ಣ(43) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿ ಬಾಲಕೃಷ್ಣರ ತಮ್ಮ ಆರೋಪಿ ದಯಾನಂದ(40)ನನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯ ವಾಸ್ತವ್ಯದ ವಿಚಾರವಾಗಿ ಮಾ.16ರಂದು ಸಂಜೆ 6:30ರ ಸುಮಾರಿಗೆ ಬಾಲಕೃಷ್ಣ ಮತ್ತು ದಯಾನಂದನ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಬಾಲಕೃಷ್ಣರ ತಲೆಗೆ ಆರೋಪಿ ದಯಾನಂದ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಇದರಿಂದ ತೀವ್ರ ರಕ್ತಸ್ರಾವಗೊಂಡ ಬಾಲಕೃಷ್ಣ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.