ಬೆಂಗಳೂರು : ಸ್ಯಾಂಕಿ ರಸ್ತೆಯಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ನಡೆದಿದ್ದ ಉಜ್ಬೇಕಿಸ್ತಾನದ ಜರಿನಾ ಡಿಜೆಪರೊವಾ ಕೊ*ಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಅಮೃತ್ ಸೋನಾ ( 22), ರಾಬರ್ಟ್ (26) ಬಂಧಿತರು. ಹೋಟೆಲ್‌ನ ಕೊಠಡಿ ಸಂಖ್ಯೆ 219ರಲ್ಲಿ ಉಳಿದುಕೊಂಡಿದ್ದ 27 ವರ್ಷದ ಜರಿನಾ ಅವರನ್ನು ಮಾ.13 ರಂದು ಕೊ*ಲೆಗೈಯಲಾಗಿತ್ತು. ಪ್ರಕರಣದ ಬೆಂಬತ್ತಿದ್ದ ಪೊಲೀಸರಿಗೆ ಹೊಟೆಲ್ ಸಿಬ್ಬಂದಿ ಕೊಲೆಗೈದಿರುವುದು ತಿಳಿದು ಬಂದಿದೆ. ಅಲ್ಲದೇ, ಆರೋಪಿಗಳಾದ ಅಮೃತ್, ರಾಬರ್ಟ್ ಜರಿನಾ ಬಳಿಯಿದ್ದ ಐಫೋನ್, 25 ಸಾವಿರ ರೂ. ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಜರಿನಾ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಲುವಾಗಿ ಉಜ್ಬೇಕಿಸ್ತಾನ ರಾಯಭಾರಿ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ಪ್ರವಾಸ ವೀಸಾದ ಅಡಿಯಲ್ಲಿ ಭಾರತಕ್ಕೆ ಬಂದಿದ್ದ ಜರಿನಾ ಮಾ.5ರಂದು ಹೊಸದಿಲ್ಲಿಯಿಂದ ನಗರಕ್ಕೆ ಆಗಮಿಸಿ ಹೋಟೆಲ್‌ನಲ್ಲಿಉಳಿದುಕೊಂಡಿದ್ದರು. ಮಧ್ಯವರ್ತಿ ರಾಹುಲ್ ಎಂಬಾತ 219ರ ಕೊಠಡಿಯನ್ನು ಜರಿನಾ ಅವರಿಗಾಗಿ ಮಾ.16ರವರೆಗೆ ಬುಕ್ ಮಾಡಿದ್ದರು. ನಿತ್ಯ 5,500 ರೂ. ಬಾಡಿಗೆಯನ್ನು ಜರಿನಾ ಪಾವತಿಸುತ್ತಿದ್ದರು. ಮಾ.13 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಡಿಗೆ ಪಾವತಿಸಿದ್ದ ಜರಿನಾ, ಆನಂತರ ಕೊಠಡಿಯಿಂದ ಹೊರಬಂದಿರಲಿಲ್ಲ.
ರಾತ್ರಿ 10.30ರ ಸುಮಾರಿಗೆ ರಾಹುಲ್ ಹೋಟೆಲ್ ಮ್ಯಾನೇಜರ್‌ಗೆ ಕರೆ ಮಾಡಿ ಜರಿನಾ ಕರೆ ಸ್ವೀಕರಿಸುತ್ತಿಲ್ಲ ಎಂದಿದ್ದರು. ಹೀಗಾಗಿ, ಮ್ಯಾನೇಜರ್ ಹಾಗೂ ಇತರ ಸಿಬ್ಬಂದಿ ಕೊಠಡಿ ಬಳಿ ತೆರಳಿ ನೋಡಿದಾಗ ಡೋರ್‌ಲಾಕ್ ಆಗಿತ್ತು. ಹೀಗಾಗಿ, ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಾಗ ಮಂಚದಡಿ ಜರಿನಾ ಮೃ*ತದೇಹ ಪತ್ತೆಯಾಗಿದ್ದು, ಮೂಗಿನಲ್ಲಿ ರಕ್ತ ಹಾಗೂ ಮುಖದಲ್ಲಿ ಗಾಯದ ಕಲೆಗಳು ಕಂಡು ಬಂದಿದ್ದವು ಎಂದು ಅಧಿಕಾರಿ ಹೇಳಿದರು.
ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ವೇಳೆ ರಾಬರ್ಟ್ ಹಾಗೂ ಅಮೃತ್ ಕಾಣೆಯಾಗಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ, ತಕ್ಷಣ ಒಂದು ಪ್ರತ್ಯೇಕ ತಂಡವು ಸಿಸಿಟಿವಿ ಹಾಗೂ ದೂರವಾಣಿ ಕರೆಗಳನ್ನು ಆಧರಿಸಿ ಆರೋಪಿಗಳು ನಗರ ತೊರೆಯುವ ಮುನ್ನವೇ ಬಂಧಿಸಲಾಯಿತು. ಆರೋಪಿಗಳು ದೋಚಿದ್ದ ಐ ಫೋನ್, 25 ಸಾವಿರ ರೂ. ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಹಣಕ್ಕಾಗಿ ಕೃತ್ಯ :
ಆರೋಪಿಗಳಾದ ಅಮೃತ್, ರಾಬರ್ಟ್ ಇಬ್ಬರೂ ಒಂದು ವರ್ಷದಿಂದ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು. ಅಮೃತ್, ಜರಿನಾ ಬ್ಯಾಗ್‌ನಲ್ಲಿ ಹಣವಿರುವುದನ್ನು ಗಮನಿಸಿ ರಾಬರ್ಟ್‌ಗೆ ತಿಳಿಸಿದ್ದ. ಬಳಿಕ ಇಬ್ಬರೂ ಮಾ. 13ರಂದು ರಾತ್ರಿ ಜರಿನಾ ಅವರಿದ್ದ ಕೊಠಡಿಗೆ ತೆರಳಿದ್ದಾರೆ. ಕೊಠಡಿ ಸ್ವಚ್ಛಗೊಳಿಸುವ ನೆಪದಲ್ಲಿ ಒಳ ಹೋಗಿದ್ದ ಅವರು, ಜರಿನಾರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಹಣ, ಐ ಫೋನ್ ದೋಚಿದ್ದರು. ಆರೋಪಿಗಳು ಜರಿನಾ ಬಳಿ ಹೆಚ್ಚಿನ ಹಣ ಸಿಗಬಹುದೆಂದು ನಿರೀಕ್ಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.