ತುಮುಕೂರು: ‘ಪಪ್ಪಾ ನಾಣು ತುಂಬಾ ಫ್ಯಾಟ್ ಇದ್ದೀನಿ, ಐ ಯಮ್ ಸಾರಿ ಪಪ್ಪಾ’ ಎಂದು ತಂದೆ ಮೊಬೈಲ್ಗೆ ಮಧ್ಯರಾತ್ರಿ ಸಂದೇಶ ರವಾನಿಸಿದ ಮಗ ಅಪಾರ್ಟ್ಮೆಂಟ್ನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜೆ.ಆರ್ ಅಂಜನ್ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ಕನಕಪುರ ರಸ್ತೆಯ ಕೋಣನಕುಂಟೆಯಲ್ಲಿ ಅಪಾರ್ಟ್ಮೆಂಟ್ನಲ್ಲಿ ಒಬ್ಬನೇ ವಾಸವಿದ್ದ.
ಸೋಮವಾರ ಮುಂಜಾನೆ 3.30 ರ ಸಮಯದಲ್ಲಿ ತಂದೆ ಮೊಬೈಲ್ಗೆ “ಪಪ್ಪಾ ನಾನು ತುಂಬಾ ಫ್ಯಾಟ್. ಐ ಯಮ್ ಸ್ವಾರಿ ಪಪ್ಪಾ” ಎಂದು ಸಂದೇಶ ಹಾಗೂ ವೀಡಿಯೋ ಒಂದನ್ನು ಕಳುಹಿಸಿದ್ದಾನೆ.
ನಿನ್ನೆ ಬೆಳಿಗ್ಗೆ ಎದ್ದು ಮೊಬೈಲ್ ನೋಡಿದ ಪಾಲಕರು ದಂಗಾಗಿ ಕೂಡಲೇ ಆತನಿಗೆ ಪೋನ್ ಮಾಡಿದರೂ ಕೂಡ ಕರೆ ಸ್ವೀಕರಿಸಲಿಲ್ಲ. ಇದೇ ವೇಳೆ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಬೇರೆಯವರು ಯುವಕನ ತಂದೆ ರಾಮ್ ಮೋಹನ್ಗೆ ಪೋನ್ ಮಾಡಿ ನಡೆದಿರುವ ಘಟನೆ ತಿಳಿಸಿದ್ದಾರೆ.
ದಪ್ಪಗಿದ್ದ ಕಾರನಕ್ಕೆ ಅನೇಕ ಬಾರಿ ಅಂಜನ್ನನ್ನು ಕಾಲೇಜಿನಲ್ಲಿ ಚುಡಾಯಿಸುತ್ತಿದ್ದರು. ಇದನ್ನು ತನ್ನ ಹೆತ್ತವರ ಎದುರು ಕೂಡ ಒಮ್ಮೆ ಅಂಜನ್ ಪ್ರಸ್ತಾವನೆ ಇಟ್ಟಿದ್ದನು. ಅದಕ್ಕೆ ಪಾಲಕರು “ಇದಕ್ಕೆಲ್ಲಾ ನೊಂದುಕೊಳ್ಳಬಾರದು.
ನಮ್ಮ ಕುಟುಂಬದಲ್ಲಿ ಎಲ್ಲರೂ ದಪ್ಪಗಿದ್ದಾರೆ. ನಿನ್ನ ಓದಿನ ಕಡೆ ಗಮನಹರಿಸು” ಎಂದು ಸಮಾಧಾನ ಮಾಡಿದ್ದರು. ಆದರೆ ಅಂಜನ್ ಅದೇ ಕಾರಣಕ್ಕೆ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡದ್ದು ದುರಂತ.
ಮಹಡಿ ಮೇಲಿಂದ ಕೆಳಗೆ ಬಿದ್ದಿರುವ ಸ್ಥಿತಿಯಲ್ಲಿ ಅಂಜನ್ ಮೃತದೇಹ ಸಿಕ್ಕಿದೆ. ಇದ್ದ ಏಕಮಾತ್ರ ಪುತ್ರನನ್ನು ಕಳದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.