ಮಂಗಳೂರು: ಬಾಲಯಕ್ಷಕೂಟ ಕದ್ರಿ ವತಿಯಿಂದ ಎರಡು ದಿನಗಳ “ದ್ವಿದಿನ ಧೀಂಗಿಣ ಸಂಭ್ರಮ” ಯಕ್ಷಗಾನ ಪ್ರದರ್ಶನ ಮತ್ತು ಯಕ್ಷ ವೈದ್ಯ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭ ಉದ್ಘಾಟಿಸಿದ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕೊರೋನಾದಿಂದ ವಿಶ್ವದಲ್ಲಿ ಜಡತ್ವ ಆವರಿಸಿದೆ. ಹಿಂದೆ ಕೃಷ್ಣ ಪರಮಾತ್ಮ ಕೂಡಾ ವಿಶ್ವಕ್ಕೆ ಜಡತ್ವ ಆವರಿಸಿದಾಗ ಗೀತೆಯ ಮೂಲಕ ಜ್ಞಾನ ನೀಡಿದ. ಈಗ ಜಡತ್ವವನ್ನು ಕಲೆಯ ಮೂಲಕ ನಿವಾರಿಸಿಕೊಳ್ಳುವ ಪ್ರಯತ್ನ ಶ್ಲಾಘನೀಯ ಎಂದರು.
ಬಾಲಯಕ್ಷಕೂಟ ಗೌರವಾಧ್ಯಕ್ಷ ದಿನೇಶ್ ದೇವಾಡಿಗ ಕದ್ರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ಬಾಲಯಕ್ಷಕೂಟದ ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ನವರಾತ್ರಿ ಸಮಿತಿ ಅಧ್ಯಕ್ಷ ವಿಷ್ಣುಮೂರ್ತಿ ಕುಳಾಯಿ, ನಮ್ಮಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೆರ, ಪತ್ರಕರ್ತರ ಸಂಘದ ಕೇಂದ್ರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಒಎಂಪಿಲ್ ಸಂಸ್ಥೆಯ ಎಚ್ ಆರ್ ವಿಭಾಗದ ಉಪಮಹಾ ಪ್ರಬಂಧಕ ಆರ್.ಕೆ.ರಾವ್. ಇದ್ದರು.
ಯಕ್ಷವೈದ್ಯ ಪುರಸ್ಕಾರ:
ಕೊರೊನಾ ಸಂಕಷ್ಟ ಕಾಲದಲ್ಲಿ ವಾರಿಯರ್ ರೀತಿ ಕೆಲಸ ಮಾಡುತ್ತಿರುವ ವೈದ್ಯರ ಪ್ರತಿನಿಧಿಯಾಗಿ ತೆಂಕು, ಬಡಗು ತಿಟ್ಟಿನ ಸವ್ಯಸಾಚಿ ಕಲಾವಿದ, ಮಣಿಪಾಲ ಕೆ.ಎಂ.ಸಿ.ಯ ಮಕ್ಕಳ ತಜ್ಞ ಡಾ. ಸುನೀಲ್ ಮುಂಡ್ಕೂರ್ ಅವರಿಗೆ ಯಕ್ಷ ವೈದ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.
ಸಂಚಾಲಕ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರೋಪ:
ಶನಿವಾರ ನಡೆದ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಕಾಯದರ್ಶಿ
ಪುರುಷೋತ್ತಮ ಭಂಡಾರಿ ಸಮಾರೋಪ ಭಾಷಣ ಮಾಡಿ, ಹಲವು ಕಲೆಗಳ ಸಂಗಮವಾಗಿರುವ ಯಕ್ಷಗಾನವು ಕೊರೋನ ಕಾಲದಲ್ಲಿ ನಿಂತ ನೀರಾಗಬಾರದು. ನೇರಪ್ರಸಾರದ ಮೂಲಕ ಯಕ್ಷಗಾನ ಆಯೋಜಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಯಕ್ಷಗಾನವನ್ನು ಮಕ್ಕಳು, ಮಹಿಳೆಯರಿಗೆ ಉಚಿತವಾಗಿ ಕಲಿಸಿ, ಅವರಿಗೆ ಉತ್ತಮ ವೇದಿಕೆ ಒದಗಿಸುವ ಮೂಲಕ ಯಕ್ಷ ಗುರು ಎಲ್ಲೂರು ಒಳ್ಳೆಯ ಕೆಲಸ ಮಾಡುತಿದ್ದಾರೆ ಎಂದರು.
ಗೌರವಾಧ್ಯಕ್ಷ ದಿನೇಶ್ ದೇವಾಡಿಗ ಕದ್ರಿ, ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೆರ ಇದ್ದರು.
ಯಕ್ಷಕೂಟದ ಜಿತೇಂದ್ರ ಕುಂದೇಶ್ವರ ಸ್ವಾಗತಿಸಿದರು. ಒಎಂಪಿಲ್ ಎಚ್ ಆರ್ ವಿಭಾಗದ ಉಪಮಹಾ ಪ್ರಬಂಧಕ ಆರ್.ಕೆ.ರಾವ್ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.
ಯಕ್ಷಗಾನ:
ಕದ್ರಿ ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ
ದಯಾನಂದ ಕೋಡಿಕಲ್ ಭಾಗವತಿಕೆಯಲ್ಲಿ ಮೊದಲನೇ ದಿನ ಬಾಲ ಯಕ್ಷಕೂಟ ಮತ್ತು ಮಹಿಳಾ ಯಕ್ಷಕೂಟ ವತಿಯಿಂದ ಗದಾಯುದ್ಧ, ಎರಡನೇ ದಿನ ಯಕ್ಷಕೂಟವತಿಯಿಂದ ಬಬ್ರುವಾಹನ ಯಕ್ಷಗಾನ ಪ್ರದರ್ಶನಗೊಂಡಿತು.
ಮಂಗಳೂರು : ನಗರದ ತಣ್ಣೀರು ಬಾವಿ ಬೀಚ್ ಅಭಿವೃದ್ಧಿ ಕೆಲಸಗಳು ‘ಒನ್ ನೇಷನ್ ಒನ್ ಡೆಸ್ಟಿನೇಷನ್’ ಯೋಜನೆಯಡಿ ಪೂರ್ಣಗೊಳಿಸಲಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ತಣ್ಣೀರು ಬಾವಿ ಬೀಚ್‌ನಲ್ಲಿ 7.59 ಕೋಟಿ ರೂ. ಅನುದಾನವನ್ನು ವಿವಿಧ ಕಾಮಗಾರಿಗೆ ನೀಡಿತ್ತು. ಅಂತೆಯೇ ಪುಣೆ ಮೂಲದ ಬಿವಿಜಿ ಇಂಡಿಯಾ ಲಿಮಿಟೆಡ್ ಎಂಬ ಕಂಪನಿಯು 7.56 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ ಎಂದು, ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಹಿಲನ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಲಭ್ಯವಿರುವ ಸೌಲಭ್ಯಗಳ ಪಟ್ಟಿ :
ತಣ್ಣೀರು ಬಾವಿ ಬೀಚ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬೀಚ್‌ಗೆ ಬರುವ ಪ್ರವಾಸಿಗರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗದಿ ಮಾಡುವ ಪ್ರವೇಶ ಶುಲ್ಕವನ್ನು ವಸೂಲಿ ಮಾಡುವ ಅವಕಾಶವನ್ನು ಟೆಂಡರ್ ಪಡೆದವರಿಗೆ ನೀಡಲಾಗುತ್ತದೆ. ಸದ್ಯ ಬೀಚ್ ನಿರ್ವಹಣೆ ಮಾಡುವ ಗುತ್ತಿಗೆ ಅವಧಿ ಅಂತ್ಯವಾಗಿದೆ. ಆದ್ದರಿಂದ ಹೊಸ ಟೆಂಡರ್ ಆಹ್ವಾನಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇಷ್ಟು ದಿನ ತಣ್ಣೀರು ಬಾವಿ ಬೀಚ್‌ಗೆ ತೆರಳುವ ಪ್ರವಾಸಿಗರಿಗೆ ಮರ ಗಿಡಗಳ ಉದ್ಯಾನವನ ಪ್ರಮುಖ ಆಕರ್ಷಣೆಯಾಗಿತ್ತು. ಸಸಿಹಿತ್ಲು, ಪಣಂಬೂರು ಬೀಚ್‌ಗೆ ಹೋಲಿಕೆ ಮಾಡಿದರೆ ಇಲ್ಲಿ ಹೆಚ್ಚಿನ ಆಕರ್ಷಣೆಗಳು, ಸೌಲಭ್ಯಗಳು ಇಲ್ಲ ಎಂಬ ಆರೋಪವಿತ್ತು. ಆದ್ದರಿಂದ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ಬೇಕಾದ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ.
ಬೀಚ್ ಆವರಣದಲ್ಲಿ ಆಹಾರ ಮಳಿಗೆಗಳು, ಸಮುದ್ರ ವೀಕ್ಷಣೆ ಮಾಡಲು ಫ್ರೇಮ್ ಮುಂತಾದ ಕಾಮಗಾರಿಗಳನ್ನು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಮಾಡಲಾಗುತ್ತಿದೆ. ಬೀಚ್‌ನಲ್ಲಿ ಬಿದಿರು ಮನೆಗಳು ನಿರ್ಮಾಣವಾಗಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡಲಿವೆ. ಬೀಚ್‌ನಲ್ಲಿ ಹುಲ್ಲಿನ ಕೊಡೆಗಳ ಕೆಳಗೆ ಕುಳಿತು ಸಮುದ್ರ ವೀಕ್ಷಣೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಬೀಚ್ ಕಸ ನಿರ್ವಹಣೆಗೆ ಘನತ್ಯಾಜ್ಯ ನಿರ್ವಹಣೆ ಘಟಕ, ಶೌಚಾಲಯಗಳ ನಿರ್ವಹಣೆ, ಬಟ್ಟೆ ಬದಲಾಯಿಸುವ ಕೊಠಡಿ, ಬಿದಿರಿನ ತಾತ್ಕಾಲಿಕ ಮನೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಬೀಚ್‌ನಲ್ಲಿ ಒದಗಿಸಲಾಗಿದೆ. ಜೊತೆಗೆ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಥಮ ಚಿಕಿತ್ಸೆ ಕೊಠಡಿ, ಸಿಸಿಟಿವಿ ಕ್ಯಾಮರಾ ನಿಯಂತ್ರಣ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಬೀಚ್ ಸ್ವಚ್ಛತಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಕರಾವಳಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನದಲ್ಲಿ ಏರುಪೇರಾಗುತ್ತಿದೆ. ಮುಂಜಾನೆ ಚಳಿ, ಮಧ್ಯಾಹ್ನ ಬಿಸಿಲು ಕಾಣಿಸಿ ಕೊಂಡು ವೈರಲ್ ಕಾಯಿಲೆಗಳಿಗೆ ವೇದಿಕೆಯಾಗುತ್ತಿದೆ. ಡಿಸೆಂಬರ್, ಜನವರಿಯಲ್ಲಿ ಚಳಿಗಾಲ ಸಾಮಾನ್ಯವಾಗಿ ಆರಂಭವಾಗುತ್ತದೆ. ಆದರೆ ಈ ಬಾರಿ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಚಳಿ ತುಸು ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆರೋಗ್ಯ ಇಲಾಖೆ ಕೂಡ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ ಎಂದು ಮಾಹಿತಿ, ಜಾಗೃತಿ ನೀಡುತ್ತಿದ್ದರೂ, ಪದೇ ಪದೆ ಚಳಿಯಿಂದಾಗಿ ಶೀತ, ಜ್ವರ, ಕೆಮ್ಮು, ಅಸ್ತಮಾದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ವೈದ್ಯರ ಬಳಿಗೆ ಹೋಗಿ ಔಷಧ ಪಡೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಳಗೊಂಡಿದೆ.
ಪರೀಕ್ಷೆ ಜತೆಗೆ ಕಾಯಿಲೆಗಳ ಚಿಂತೆ :
ಜನವರಿ ತಿಂಗಳಲ್ಲಿ ಬಹಳಷ್ಟು ಶಾಲಾ-ಕಾಲೇಜುಗಳಲ್ಲಿ ಪರೀಕ್ಷಾ ಸಮಯ ಆದರೆ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಶಾಲೆಗೆ ಹಾಜರಾಗುತ್ತಿದ್ದಾರೆ. ಮಕ್ಕಳಿಂದ ಮಕ್ಕಳಿಗೆ ಜ್ವರ ಹರಡುವ ಪ್ರಮೇಯ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಸೂಚನೆ ರವಾನಿಸುವ ಕೆಲಸ ಮಾಡಿದೆ.
ಕರಾವಳಿಯಲ್ಲಿ ಚಳಿ ಇಳಿಕೆ ಸಾಧ್ಯತೆ :
ಉತ್ತರ ಭಾರತದಿಂದ ಬೀಸುತ್ತಿರುವ ಗಾಳಿ ಕಡಿಮೆಯಾಗಿ ಬಂಗಾಳಕೊಲ್ಲಿ ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಮಾಣ ಜಾಸ್ತಿಯಾಗುವ ಕಾರಣ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಉಂಟಾಗಲಿದೆ. ಇದರಿಂದ ಚಳಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಜ.13ರಂದು ಕರಾವಳಿ, ಮಲೆನಾಡು ಭಾಗದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಬಳಿಕ ಚಳಿಯ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದ್ದು, ವಾತಾವರಣ ದಲ್ಲಿ ತೇವಾಂಶ ಇದ್ದರೆ ಚಳಿ ಕಡಿಮೆಯಾಗಬಹುದು. ಆದರೆ ಒಣಹವೆ ಇದ್ದರೆ ಮಾತ್ರ ಚಳಿ ಏರಿಕೆಯಾಗಲಿದೆ. ಕೆಲವು ದಿನಗಳಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮುಂಜಾನೆ ಕನಿಷ್ಠ ತಾಪಮಾನ ಇಳಿಕೆಯಾಗಿ 20-21 ಡಿ.ಸೆ. ಆಸುಪಾಸಿನಲ್ಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ 1-2 ಡಿ.ಸೆ.ನಷ್ಟು ಇಳಿಕೆಯಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿ ಮುಂಜಾನೆ 8-9 ಗಂಟೆಯವರೆಗೂ ಚಳಿ ಅನುಭವವಾಗುತ್ತಿದೆ. ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆ ಸಹಿತ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಶೀತ ಗಾಳಿ ಬೀಸುವ ಎಚ್ಚರಿಕೆ ನೀಡಿದ್ದು, ಕನಿಷ್ಢ ತಾಪಮಾನ ವಾಡಿಕೆಗಿಂತ ಇನ್ನೂ 2-4 ಡಿ.ಸೆ. ವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ.
ಮಂಗಳೂರು: ಅ*ಕ್ರಮವಾಗಿ ಮುಕ್ಕ ಗ್ರಾಮದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಯನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿ ಅನರುಲ್ ಶೇಖ್ (25)ನನ್ನು ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಅನರುಲ್ ಶೇಖ್ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರಿಯ ಗಡಿರೇಖೆ ಲಾಲ್ಗೋಲ್ ಮೂಲಕ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದನು. ಬಳಿಕ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಿಂದ ಉಡುಪಿಗೆ ಬಂದಿದ್ದನು. ಇಲ್ಲಿಂದ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಕ್ಕ ಗ್ರಾಮದ ರೋಹನ್ ಎಸ್ಟೇಟ್ನಲ್ಲಿ ಅನರುಲ್ ಶೇಖ್ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.
ಅನರುಲ್ ಶೇಖ್ ಬಗ್ಗೆ ಖಚಿತ ಮಾಹಿತಿ ಪಡೆದ ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನರುಲ್ ಶೇಖ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.