ಕೋವಿಡ್ 19 ಸಾಂಕ್ರಾಮಿಕ ರೋಗ: ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ
ಜಿನೀವಾ: ಜಾಗತಿಕವಾಗಿ ತೀವ್ರ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೋವಿಡ್ 19 ಒಂದು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಹೊರಡಿಸಿದೆ.
ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನು ಆವರಿಸಿಕೊಳ್ಳುತ್ತಿರುವ ಮಾರಕ ಕೊರೊನಾ ಒಂದು ಸಾಂಕ್ರಾಮಿಕ ರೋಗ. ಇದನ್ನು ತಡೆಗಟ್ಟಲು ಎಲ್ಲ ರಾಷ್ಟ್ರಗಳು ಜಾಗೃತರಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ. ಇನ್ನು ಜಗತ್ತಿನ 114 ರಾಷ್ಟ್ರಗಳಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಇದುವರೆಗೂ 1.26 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದೆ. 4634 ಜನ ಈ ಮಾರಕ ಕಾಯಿಲೆಗೆ ಮೃತಪಟ್ಟಿದ್ದಾರೆ. 68304 ಗುಣಮುಖರಾಗಿದ್ದಾರೆ ಎನ್ನಲಾಗಿದೆ.
ಶೇ. 85 ರಷ್ಟು ಸೋಂಕಿನ ಮೂಲಕವೇ ರೋಗ ಹರಡುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಕೊರೊನಾ ಒಂದು ಗಂಭೀರ ಪಿಡುಗಾಗಿದ್ದು, ಎಲ್ಲ ರಾಷ್ಟ್ರಗಳು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡು ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.