ಮಂಗಳೂರು: ಜಿಲ್ಲಾಡಳಿತ, ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಮಂಗಳೂರು ವಿಶ್ವವಿದ್ಯಾಲಯ ಹಾಗೂ ಯೆನಪೋಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ ಗ್ರೂಪ್ ಹೆಡ್ ಕ್ವಾಟ್ರಸ್ ಮತ್ತು ಮಂಗಳೂರು ಸೈಕಲಿಂಗ್ ಕ್ಲಬ್‍ನ ಸಂಯುಕ್ತಾಶ್ರಯದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬೈಸಿಕಲ್ ದಿನಾಚರಣೆ ಹಾಗೂ ರ್ಯಾಲಿಗೆ ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
13 ಕಿ.ಮೀ ಬೈಸಿಕಲ್ ರ್ಯಾಲಿಯು ಜಿಲ್ಲಾಧಿಕಾರಿಯವರ ಕಚೇರಿಯಿಂದ ಪ್ರಾರಂಭವಾಗಿ ಮಂಗಳಾದೇವಿ, ಮುಗೇರು, ತೊಕ್ಕೊಟ್ಟು, ಮಾಸ್ತಿಕಟ್ಟೆ, ರಾಣಿ ಅಬ್ಬಕ್ಕ ವೃತ್ತದ ಮೂಲಕ ಉಳ್ಳಾಲದಲ್ಲಿ ಸಮಾಪನಗೊಂಡಿತ್ತು. ಸೈಕಲ್ ರ್ಯಾಲಿಯಲ್ಲಿ 140 ಯುವಕರು ಭಾಗವಹಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ ಕುಮಾರ್, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಅಶ್ವಿನಿ ಶೆಟ್ಟಿ, ನೆಹರು ಯುವಕೇಂದ್ರದ ಜಗದೀಶ ಕೆ., ಮಂಗಳೂರು ನಗರದ ಸೈಕಲಿಂಗ್ ಕ್ಲಬ್ ಅಧ್ಯಕ್ಷ ಅನಿಲ್ ಶೇಟ್, ಕೊಣಾಜೆ ಮಂಗಳ ಗ್ರಾಮೀಣ ಯುವಕ ಮಂಡಲದ ಅಬ್ದುಲ್ ರಹೆಮಾನ್ ಉಪಸ್ಥಿತರಿದ್ದರು.
ನಂತರ ಉಳ್ಳಾಲ ನಗರ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಭಾ ಕಾರ್ಯಕ್ರಮದಲ್ಲಿ ಉಳ್ಳಾಲ ನಗರ ಪಂಚಾಯತ್ ಪೌರಾಯುಕ್ತ ರಾಮಪ್ಪ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಪರಿಸರ ಮತ್ತು ಶಬ್ಧಮಾಲಿನ್ಯ ತಡೆಗಟ್ಟುವಲ್ಲಿ ಬೈಸಿಕಲ್‍ನ ಪಾತ್ರ ಪ್ರಮುಖವಾದದ್ದು ಎಂದರು.
ಈ ಸಂದರ್ಭದಲ್ಲಿ 7 ವರ್ಷದಲ್ಲಿ 1 ಲಕ್ಷ ಕಿ.ಮೀ ಸೈಕಲ್ ಸವಾರಿ ಮಾಡಿರುವ ಮಂಗಳೂರು ನಗರದ ಸೈಕಲಿಂಗ್ ಕ್ಲಬ್‍ನ ಅಧ್ಯಕ್ಷ ಅನಿಲ್ ಶೇಟ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ನಗರ ಪಂಚಾಯತ್ ಅಧ್ಯಕ್ಷೆ ಚಿತ್ರಕಲಾ, ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್.ಸಂಯೋಜನಾಧಿಕಾರಿ ಡಾ. ನಾಗರತ್ನ ಹಾಗೂ ಇತರರು ಇದ್ದರು.