ಟೆಹರಾನ್: ಇರಾನ್‌ನಲ್ಲಿ ಹಿಜಾಬ್ ವಿರೋಧಿ ಹೋರಾಟ ಅನೇಕ ದಿನಗಳಿಂದ ನಡೆಯುತ್ತಿದ್ದು ಅನೇಕ ಮಹಿಳೆಯರು ಇದೇ ಹೋರಾಟದಲ್ಲಿ ಬಲಿಯಾಗಿದ್ದಾರೆ. ಪೊಲೀಸರ ದೌರ್ಜನ್ಯ ಅದೆಷ್ಟೇ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಪಟ್ಟು ಬಿಡದ ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಹೋರಾಟ ಇರಾನ್ ಸರ್ಕಾರವನ್ನು ಕೊನೆಗೂ ಸೋಲುಣಿಸಿದೆ.
ಮಹಿಳೆಯರ ಮೇಲೆ ವಿಧಿಸಲಾಗಿರುವ ಕಠಿಣ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿತರಾಗಿ ಮೃತಪಟ್ಟ ಮಹ್ಸಾ ಅಮಿನಿ ಅವರ ಸಾವಿನಿಂದ ಪ್ರತಿಭಟನೆ ಭುಗಿಲೆದ್ದ ಮೂರು ತಿಂಗಳ ಬಳಿಕ ನೈತಿಕ ಪೊಲೀಸ್ ವಿಭಾಗವನ್ನು ಇರಾನ್ ರದ್ದುಗೊಳಿಸಿದೆ.
ಕುರ್ದಿಶ್ ಮೂಲದ 22 ವರ್ಷದ ಇರಾನ್ ಯುವತಿ ಮಹ್ಸಾ ಅಮಿನಿ ಅವರನ್ನು ಟೆಹರಾನ್ ಪೊಲೀಸರು ಬಂಧಿಸಿದ ಮೂರು ದಿನಗಳ ಬಳಿಕ ನಿಗೂಢವಾಗಿ ಮೃತಪಟ್ಟಿದ್ದರು.
ಇರಾನ್‌ನ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಇದು ಇರಾನ್‌ನಲ್ಲಿ ಅನೇಕ ವರ್ಷಗಳಿಂದ ಸುಪ್ತವಾಗಿದ್ದ, ವಸ್ತ್ರ ಸಂಹಿತೆ ವಿರುದ್ಧದ ಮಹಿಳೆಯರ ಆಕ್ರೋಶ ಹೊರಬಂದಿತ್ತು. ಪೊಲೀಸರ ಲಾಠಿ, ಗುಂಡೇಟುಗಳಿಗೆ ಜಗ್ಗದೆ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಮಹಿಳೆಯರ ನೇತೃತ್ವದ ಪ್ರತಿಭಟನೆಯನ್ನು ಅಧಿಕಾರಿಗಳು ‘ಬಂಡಾಯ’ ಎಂದು ಕರೆದಿದ್ದಾರೆ.
“ನ್ಯಾಯಾಂಗದೊಂದಿಗೆ ನೈತಿಕ ಪೊಲೀಸ್ ಗಿರಿ ಮಾಡುವುದು ಏನೂ ಇಲ್ಲ. ಅದನ್ನು ರದ್ದುಗೊಳಿಸಲಾಗಿದೆ” ಎಂದು ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಹೇಳಿರುವುದಾಗಿ ಸ್ಥಳೀಯ ಮಾಧ್ಯಮ ಭಾನುವಾರ ವರದಿ ಮಾಡಿದೆ.
ಮಹಿಳೆಯರ ಮೇಲೆ ನಿಯಂತ್ರಣ ಹೇರಲು ಗಷ್ಟ್- ಇ- ಎರ್ಷಾದ್ ಅಥವಾ ‘ಗೈಡೆನ್ಸ್ ಪ್ಯಾಟ್ರೋಲ್’ ಎಂದು ಕರೆಯಲಾಗುವ ನೈತಿಕ ಪೊಲೀಸ್ ವಿಭಾಗವನ್ನು ಕಟ್ಟರ್ ಸಂಪ್ರದಾಯವಾದಿ ಅಧ್ಯಕ್ಷ ಮಹಮೌದ್ ಅಹ್ಮದಿನೇಜದ್ ಸ್ಥಾಪಿಸಿದ್ದರು.
ಮಹಿಳೆಯರು ಕಡ್ಡಾಯವಾಗಿ ತಲೆಯ ಭಾಗವನ್ನು ಮುಚ್ಚಿಕೊಳ್ಳುವಂತೆ ವಸ್ತ್ರ ಸಂಹಿತೆ ಪಾಲಿಸುವುದನ್ನು ಖಾತರಿಪಡಿಸುವುದು ಇದರ ಕರ್ತವ್ಯವಾಗಿತ್ತು. “ಘನತೆ ಮತ್ತು ಹಿಜಾಬ್‌ನ ಸಂಸ್ಕೃತಿಯನ್ನು ಹರಡುವುದು” ಇದರ ಉದ್ದೇಶ ಎಂದು ಇರಾನ್ ಸರ್ಕಾರ ಹೇಳಿತ್ತು. 2006ರಲ್ಲಿ ಈ ಘಟಕ ಗಸ್ತು ಕಾರ್ಯ ಆರಂಭಿಸಿತ್ತು.
ಇದರ ನಡುವೆಯೂ ಅನೇಕ ಮಹಿಳೆಯರು ನಿಯಮವನ್ನು ಧಿಕ್ಕರಿಸುವುದನ್ನು ಮುಂದುವರಿಸಿದ್ದಾರೆ. ಅನೇಕ ಮಹಿಳೆಯರನ್ನು, ಯುವತಿಯರನ್ನು ಹತ್ಯೆ ಆಗಿರುವುದು ಇದೀಗ ಹಿಜಾಬ್ ವಿರೋಧಿ ಹೋರಾಟಕ್ಕೆ ಪುಷ್ಠಿ ನೀಡಿದೆ.
ಕೊನೆಗೂ ಮಹಿಳೆಯರ ಹೋರಾಟಕ್ಕೆ ಇರಾನ್ ಸರ್ಕಾರ ಸೊಲುಂಡಿದ್ದು ನೈತಿಕ ಪೊಲೀಸ್ ಗಿರಿ ರದ್ದುಗೊಳಿಸಲಾಗಿದೆ.