ಆಗಸದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ:ಮಗುವಿಗೆ ಜೀವನ ಪರ್ಯಾಂತ ಉಚಿತ ಪ್ರಯಾಣದ ಗಿಫ್ಟ್ ನೀಡಿದ ಇಂಡಿಗೋ..!
ಬೆಂಗಳೂರು : ಕೆಲವರ ಜನನ ಆಸ್ಪತ್ರೆಯಲ್ಲಾದರೆ, ಮತ್ತೆ ಕೆಲವರದ್ದು ಮನೆಯಲ್ಲಾಗಿರುತ್ತದೆ. ಇನ್ನು ಮುಂದೆ ಹೋದರೆ ಅ್ಯಂಬುಲೆನ್ಸ್ ಅಥವಾ ಇತರೆ ವಾಹನಗಳಲ್ಲೂ ಜನ್ಮ ನೀಡಿರುವುದನ್ನು ನಾವು- ನೀವು ಕೇಳಿದ್ದೇವೆ.
ಆದರೆ ಇಲ್ಲೊಬ್ಬರು ಮಹಿಳೆ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ. ಅಕ್ಟೋಬರ್ 8 ರಂದು ಈ ವಿದ್ಯಮಾನ ನಡೆದಿದೆ. ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಇಂಡಿಗೋ ವಿಮಾನದಲ್ಲಿ ಗಂಡು ಮಗುವಿನ ಜನನವಾಗಿದೆ.
ಅಚಾನಕ್ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ವಿಮಾನ ಸಂಸ್ಥೆ ಸಿಬ್ಬಂದಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದರು. ವಿಮಾನ ಟೇಕ್ ಆಫ್ ಆಗಿ ಬಾನಂಗಳದಲ್ಲಿ ಇರುವ ಹೆರಿಗೆ ನೋವು ಶುರು ಆದ್ದರಿಂದ ವಿಮಾನ ಹಿಂದಕ್ಕೂ ಹೋಗಲಿಕ್ಕೆ ಆಗದೆ, ಇಳಿಯಲಿಕ್ಕಾಗದೆ ಸಂಕಷ್ಟಕ್ಕೀಡಾದರು.
ಇತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 7-40 ಕ್ಕೆ ಫ್ಲೈಟ್ ಲ್ಯಾಂಡ್ ಆಗಬೇಕಿತ್ತು. ಇದರ ಮಧ್ಯದಲ್ಲೆ ಪ್ರಸವ ವೇದನೆ ಶುರುವಾದ ಹಿನ್ನೆಲೆ ಸಿಬ್ಬಂದಿ ಆಗಸದಲ್ಲೆ ಹೆರಿಗೆ ಮಾಡಿಸುವ ಸಾಹಸಕ್ಕೆ ಕೈಹಾಕಿದರು.
ಇದರ ನೇತೃತ್ವ ವಹಿಸಿದರು ಪ್ರಸೂತಿ ತಜ್ಞೆ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಶೈಲಜಾ.
ವಿಮಾನದಲ್ಲಿದ್ದ ಸಹ ಪ್ರಯಾಣಿಕೆಯಾಗಿದ್ದ ಆಕೆ ಹತ್ತು ವರ್ಷಗಳ ನಂತರ 30 ಸಾವಿರ ಅಡಿ ಎತ್ತರದಲ್ಲಿ ವಿಮಾನದೊಳಗೆ ವಾಷ್‌ರೂಮ್ ನಂತಹ ಕಿರಿದಾದ ಜಾಗದಲ್ಲಿ ವಿಮಾನದಲ್ಲಿದ್ದ ಪ್ರಥಮ ಚಿಕಿತ್ಸಾ ಪರಿಕರಗಳನ್ನು ಮತ್ತು ಮಹಿಳಾ ಸಿಬಂದಿಗಳ ಸಹಾಯದೊಂದಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.
ಈ ಪ್ರಯತ್ನ ಫಲ ನೀಡಿದ್ದು ತಾಯಿ ಮತ್ತು ಮಗು ಆರೋಗ್ಯ ವಾಗಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಾಯಿ ಮಗು ಸೇರಿದಂತೆ ಸಿಬ್ಬಂದಿಗೆ ಗ್ರೌಂಡ್ ಸ್ಟಾಫ್ ಅದ್ದೂರಿ ಸ್ವಾಗತ ಕೋರಿ ಸಂಭ್ರಮದಿಂದ ಬರಮಾಡಿಕೊಂಡರು.
ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಮಹಿಳೆಯ ನೆರವಿಗೆ ನಿಂತ ವಿಮಾನ ಸಂಸ್ಥೆ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಸದ್ಯ ತಾಯಿ ಮಗು ಇಬ್ಬರು ಕ್ಷೇಮವಾಗಿದ್ದು, ಅಪರೂಪದ ಘಟನೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಾಕ್ಷಿಯಾಗಿದೆ.