ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉಮಾದೇವಿ ಮೃತಪಟ್ಟ ದುರ್ದೈವಿ.
ಉಮಾ ಅವರು ಭಾನುವಾರ ಶ್ರೀನಗರದಲ್ಲಿರುವ ಪುತ್ರಿ ವನಿತಾ ಮನೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ವನಿತಾ ಜತೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದರು.
ಬೆಳಗ್ಗೆ ವಾಟಾಳ್ ನಾಗರಾಜ್ ರಸ್ತೆಯ ಸುಜಾತ ಥಿಯೇಟರ್ ಬಳಿ ಹೋಗುವಾಗ ರಸ್ತೆ ಗುಂಡಿ ಎದುರಾಗಿದೆ.
ಗುಂಡಿ ನೋಡಿದ ವನಿತಾ ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಬ್ರೇಕ್ ಹಾಕಿದ್ದಾರೆ. ಈ ವೇಳೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಎಸ್‌ಐ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಉಮಾ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿದ್ದಾರೆ.
ಮಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೆಎಸ್‍ಆರ್‌ಟಿಸಿ ಬಸ್ ಚಾಲಕ ಮಾರುತಿಯನ್ನು ಬಂಧಿಸಿದ್ದಾರೆ.
ಪೊಲೀಸರು ಬಸ್ಸನ್ನು ಜಪ್ತಿ ಮಾಡಿದ್ದಾರೆ. ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.