ಲಕ್ನೋ: ಮಹಿಳೆಯೊಬ್ಬಳು ಅಕ್ರಮ ಸಂಬಂಧವನ್ನು ಮುಚ್ಚಿಟ್ಟುಕೊಳ್ಳಲು ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನೇ ಕೊಲೆ ಮಾಡಿ, ರಾಸಾಯನಿಕದಲ್ಲಿ ಆ ಶವವನ್ನು ಮುಳುಗಿಸಿಟ್ಟ ಘಟನೆ ಬಿಹಾರದ ಮುಜಾಫರ್ಪುರದ ಸಿಖಂದರಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
30 ವರ್ಷದ ರಾಕೇಶ್ ಎಂಬಾತ ಕೊಲೆಯಾಗಿದ್ದು ಸಾವಿನ ಬೆನ್ನತ್ತಿ ಹೋದ ಪೊಲೀಸರಿಗೆ ಅದರ ಹಿಂದೆ ಆತನ ಹೆಂಡತಿ ರಾಧಾ, ಆಕೆಯ ಪ್ರಿಯಕರ ಸುಭಾಷ್, ಆಕೆಯ ತಂಗಿ ಹಾಗೂ ತಂಗಿಯ ಗಂಡನ ಕೈವಾಡವಿರುವುದು ಗೊತ್ತಾಯಿತು.
ಗಂಡನನ್ನು ಕೊಲೆ ಮಾಡಿದ ಬಳಿಕ ಆ ಹೆಣವನ್ನು ಸಾಗಿಸುವುದು ಕಷ್ಟವೆಂದು ಅರಿತ ರಾಧಾ ಏನು ಮಾಡುವುದೆಂದು ಇಂಟರ್ನೆಟ್ನಲ್ಲಿ ಹುಡುಕಾಡಿದ್ದಳು. ಆಗ ಆಕೆಯ ಪ್ರೇಮಿಯ ಸಲಹೆಯಂತೆ ರಾಕೇಶನ ಶವವನ್ನು ಇಬ್ಬರೂ ಸೇರಿ ತುಂಡಾಗಿ ಕತ್ತರಿಸಿದ್ದರು. ನಂತರ ಅದಕ್ಕೆ ರಾಸಾಯನಿಕ ಸಿಂಪಡಿಸಿ, ವಾಸನೆ ಹರಡದಂತೆ ಮಾಡಿದ್ದರು.
ಬಳಿಕ ಆ ಶವವನ್ನು ಕಟ್ಟಿ ತಮ್ಮ ಬಾಡಿಗೆ ಮನೆಯ ರೂಮಿನಲ್ಲಿ ಇಟ್ಟಿದ್ದರು. ಇದಕ್ಕೆ ರಾಧಾ ತನ್ನ ತಂಗಿ ಹಾಗೂ ತಂಗಿಯ ಗಂಡನ ಸಹಾಯವನ್ನೂ ಪಡೆದಿದ್ದಳು.
ಆದರೆ, ಶವಕ್ಕೆ ಸಿಂಪಡಿಸಿದ್ದ ರಾಸಾಯನಿಕದಿಂದ ಶವ ತುಂಬಿಟ್ಟಿದ್ದ ಬ್ಯಾಗ್ ಜೋರಾಗಿ ಶಬ್ದವಾಗಿ ಸ್ಫೋಟವಾಗಿತ್ತು. ಇದರಿಂದ ಹೆದರಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಅಪಾರ್ಟ್ಮೆಂಟ್ಗೆ ಬಂದ ಪೊಲೀಸರು ಶಬ್ದ ಕೇಳಿದ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ತುಂಡುಗಳನ್ನು ಗಮನಿಸಿದರು.
ಅಲ್ಲದೆ, ಮನೆಯಲ್ಲಿ ರಾಸಾಯನಿಕ ಸಿಂಪಡನೆ ಮಾಡಿದ ಕುರುಹುಗಳಿದ್ದವು. ಇದರಿಂದ ಅನುಮಾನಗೊಂಡ ಅವರು ರೂಮನ್ನು ಪರಿಶೀಲಿಸಿದಾಗ ತುಂಡಾಗಿದ್ದ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ
ಅದು ರಾಕೇಶನ ಶವ ಎಂಬುದು ಖಚಿತವಾಗಿತ್ತು.
ಬಿಹಾರದಲ್ಲಿ ಆಲ್ಕೋಹಾಲ್ ನಿಷೇಧವಿದ್ದರೂ ರಾಕೇಶ್ ಅಕ್ರಮವಾಗಿ ಲಿಕ್ಕರ್ ಬ್ಯುಸಿನೆಸ್ ನಡೆಸುತ್ತಿದ್ದ. ಆಗೆಲ್ಲ ತನ್ನ ಹೆಂಡತಿಯೊಂದಿಗೆ ಈ ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ವಾಸ ಮಾಡುತ್ತಿದ್ದ. ಆತ ಅಲ್ಲಿರುವ ವಿಚಾರ ಬಹುತೇಕರಿಗೆ ಗೊತ್ತಿರಲಿಲ್ಲ.
ಪೊಲೀಸರು ಕೂಡ ಆತನಿಗಾಗಿ ಹುಡುಕಾಡುತ್ತಿದ್ದರು. ಬ್ಯುಸಿನೆಸ್ ಸಲುವಾಗಿ ಬೇರೆ ರಾಜ್ಯಗಳಿಗೆ ಓಡಾಡುತ್ತಿದ್ದ ರಾಕೇಶ್ ತನ್ನ ಮನೆಯ ಕಡೆ ನೋಡಿಕೊಳ್ಳಲು ಗೆಳೆಯ ಸುಭಾಷ್ಗೆ ಹೇಳಿದ್ದ.
ರಾಕೇಶ್ ಇಲ್ಲದಿದ್ದಾಗ ಆತನ ಮನೆಗೆ ಹೋಗುತ್ತಿದ್ದ ಸುಭಾಷ್ ರಾಧಾ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಈ ವಿಷಯ ರಾಕೇಶನಿಗೆ ಗೊತ್ತಿರಲಿಲ್ಲ.
ಕ್ರಮೇಣ ರಾಕೇಶನ ಬಗ್ಗೆ ಆಸಕ್ತಿ ಕಳೆದುಕೊಂಡ ರಾಧಾ ಆತನನ್ನು ಕೊಂದು ಸುಭಾಷ್ ಜೊತೆ ಇರಲು ಯೋಚಿಸಿದಳು.
ಅದಕ್ಕೆ ಆಕೆಯ ತಂಗಿ ಕೂಡ ಸಹಾಯ ಮಾಡಿದಳು. ತೀಜ್ ಪ್ರಯುಕ್ತ ಗಂಡ ರಾಕೇಶನಿಗೆ ಮನೆಗೆ ಬರಲು ಹೇಳಿದ್ದ ರಾಧಾ ಸುಭಾಷ್ನ ಸಹಾಯದೊಂದಿಗೆ ಆತನನ್ನು ಅಂದೇ ಕೊಲೆ ಮಾಡಿದ್ದಳು. ಹಲವು ದಿನಗಳಾದರೂ ರಾಕೇಶನ ಸುಳಿವು ಇಲ್ಲದ ಕಾರಣ ಆತನ ಸೋದರ ದಿನೇಶ್ ರಾಧಾಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ.
ರಾಧಾ ತನ್ನ ಅಕ್ರಮ ಸಂಬಂಧವನ್ನು ಮುಚ್ಚಿಟ್ಟುಕೊಳ್ಳಲು ನನ್ನ ಅಣ್ಣನನ್ನು ಕೊಲೆ ಮಾಡಿರುವ ಅನುಮಾನವಿದೆ ಎಂದು ದೂರು ನೀಡಿದ್ದ ಅಲ್ಲದೆ, ರಾಧಾ ಹಾಗೂ ಸುಭಾಷ್ ಅಕ್ರಮ ಸಂಬಂಧದ ಬಗ್ಗೆ ಸುತ್ತಮುತ್ತಲಿನ ಎಲ್ಲರಿಗೂ ಗೊತ್ತಿದೆ.
ಆದರೆ, ರಾಕೇಶ್ ಇದನ್ನು ನಂಬಿರಲಿಲ್ಲ ಎಂದು ಆತ ದೂರಿನಲ್ಲಿ ತಿಳಿಸಿದ್ದ. ಆತನ ದೂರನ್ನು ಆಧರಿಸಿ ರಾಧಾಳ ವಿಚಾರಣೆ ನಡೆಸಿದ ಪೊಲೀಸರಿಗೆ ಆಕೆ ತನಗೇನೂ ಗೊತ್ತಿಲ್ಲವೆಂದೇ ಹೇಳಿದ್ದಳು. ಆದರೆ, ರಾಸಾಯನಿಕ ಸ್ಫೋಟವಾಗಿದ್ದರಿಂದ ಆಕೆಯ ಕೃತ್ಯ ಬೆಳಕಿಗೆ ಬಂದಿತ್ತು.