ಮಂಗಳೂರು: ಸಮಾಜಕ್ಕೆ ಕಂಟಕ ಸೃಷ್ಠಿಯಾಗಿದೆ. ಸರಣಿ ಹತ್ಯೆಗಳಾಗಿದೆ. ಅದು ಆಗದಿರಲು ಎರಡೂ ಸಮಾಜಕ್ಕೆ ಭರವಸೆಯ ಕರೆ ಕೊಡ್ತಾರೆ ಅನ್ನುವ ನಿರೀಕ್ಷೆ ಹುಸಿಯಾಯ್ತು.
ಸಿಎಂ ಬಂದಿದ್ದ ಸಂದರ್ಭ ಸಂಜೆ ವೇಳೆವರೆಗೂ ಇಲ್ಲೇ ಇದ್ರು. ಅವರು ಹತ್ಯೆಯಾದ ಯುವಕನ ಕುಟುಂಬಕ್ಕೆ ಎಷ್ಟು ಹಣ ಕೊಟ್ರು ಅದರ ಮೇಲೆ ನನ್ನ ತಕರಾರಿಲ್ಲ. ಮತ್ತೆ 50 ಲಕ್ಷ ಬೇಕಾದ್ರೂ ಕೊಡಿ. ಆದ್ರೆ ಅವರು ಇಲ್ಲೇ ಇರುವಾಗ ಸುರತ್ಕಲ್‌ನಲ್ಲಿ ಮತ್ತೊಂದು ಚೂರಿ ಇರಿತ ಆಗುತ್ತೆ.
ಸಿಎಂ ಅಲ್ಲಿಗೆ ಭೇಟಿ ಕೊಟ್ಟು ಆ ಸಮುದಾಯಕ್ಕೂ ಸಾಂತ್ವನ ಹೇಳಿ, ನಿಮ್ಮ ಜೊತೆ ನಾವಿದ್ದೇವೆ ಅಂತಿದ್ದರೆ ಬಹುಶಃ ನಿಮ್ಮ ಮೇಲೆ ಸಂಶಯ ಬರುತ್ತಿರಲಿಲ್ಲ. ಯಾರನ್ನು ಮೆಚ್ಚಿಸೋಕೆ ನೀವು ಸಿಎಂ ಆಗಿದ್ದೀರಿ? ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇತ್ತೀಚೆಗೆ ನಡೆದ ಸರಣಿ ಹತ್ಯೆ ಪ್ರಕರಣದ ಯುವಕರ ಕುಟುಂಬವನ್ನು ಭೇಟಿ ಮಾಡಲು ಕರಾವಳಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಕಳೆದ 10-13 ದಿನಗಳಿಂದ ಆದಂತಹ ಹತ್ಯೆಯ ವಿಷಯದಲ್ಲಿ ನಿಮ್ಮ ಮುಂದೆ ಚರ್ಚೆ ಮಾಡ್ಲಿಕ್ಕೆ ಬರ್ತೇನೆ ಅಂತ ನಾನು ನಿರೀಕ್ಷೆ ಇಟ್ಟಿರಲಿಲ್ಲ.
ಇದು ನನಗೆ ಸ್ವಲ್ಪ ಬೇಜಾರಿದೆ. ಹಲವಾರು ಬಾರಿ ಕರಾವಳಿ ಪ್ರದೇಶಕ್ಕೆ ಬಂದಾಗ ಯುವಕರಿಗೆ ಹಾಗೂ ನಾಗರಿಕರಿಗೆ ಈ ಭಾಗದಲ್ಲಿ ಬೆಂಗಳೂರು ನಗರವನ್ನು ಮೀರಿಸಿ ಆರ್ಥಿಕ ಚಟುವಟಿಕೆ ಮಾಡ್ತಿರುವ ಜಿಲ್ಲೆ ಇದು ಅಂತ ಹೇಳಿದ್ದೆ.
ಆದರೆ ಅದನ್ನು ಬಿಟ್ಟು ಅನೇಕ ಬಾರಿ ಕೋಮುಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಆಗ್ತಾನೇ ಇದೆ. ಅದನ್ನು ನಾನು ಗಮನಿಸಿದ್ದೇನೆ. ಜೆಡಿಎಸ್ ಜನತಾ ದಳ ಆಗಿದ್ದಾಗಲೂ ಕೂಡಾ ಕರಾವಳಿ ಪ್ರದೇಶದಲ್ಲಿ ದೊಡ್ಡ ಮಟ್ಟದ ಶಕ್ತಿಯನ್ನು ಕ್ರೋಢೀಕರಿಸಲು ಆಗಿಲ್ಲ.
ಇಲ್ಲಿ ಸಣ್ಣಪುಟ್ಟ ವಿಷಯವನ್ನೇ ದೊಡ್ಡ ಮಾಡಿ ಹಿಂದೂ ರಾಷ್ಟ್ರವನ್ನೇ ಕಟ್ಟಬೇಕು ಎನ್ನುವ ಬಿಜೆಪಿ ಪಕ್ಷದ ಕೆಲವು ಸಂಘಟನೆಗಳು ಜನತೆಗೆ ಈ ಅಶಾಂತಿಯ ವಾತಾವರಣಕ್ಕೆ ಕೊಡ್ತಿರುವ ಪ್ರೋತ್ಸಾಹ , ಮತ್ತೊಂದು ಕಡೆ ಇನ್ನೊಂದು ವರ್ಗದ ಸಮಾಜಕ್ಕೆ ನಿಮಗೆ ಸಮಸ್ಯೆ ಆದಾಗ ರಕ್ಷಣೆ ಕೊಡುವವರು ನಾವುಗಳು ಅಂತ ಭಾವನೆ ಸೃಷ್ಟಿಮಾಡಿ ಇಲ್ಲಿ ಒಂದು ನಿರಂತರವಾಗಿ ಹಿಂದೂ ಹಾಗೂ ಮುಸ್ಲಿಂ ಸಮಾಜದ ನಡುವೆ ಜನಸಾಮಾನ್ಯರಲ್ಲಿ ಕಂದಕ ಉಂಟುಮಾಡಿದ್ದಾರೆ.
ಇವತ್ತು ಮೂರೂ ಹತ್ಯೆಯಾದ ಕುಟುಂಬದ ಮನೆಗಳಿಗೆ ಭೇಟಿ ಕೊಟ್ಟೆ. ನಾನು ಬೇರೆ ರಾಜಕಾರಣಿಗಳ ಥರ ಫ್ಲೈಯಿಂಗ್ ವಿಸಿಟ್ ಕೊಟ್ಟಿಲ್ಲ.
ಕುಟುಂಬದ ಹಿನ್ನೆಲೆ ತಿಳ್ಕೊಂಡು ಬಂದಿದ್ದೇನೆ. ಅವರಿಗೆ ಎಷ್ಟು ನೋವಿದ್ರೂ ಸರ್ಕಾರದ ಮೇಲೆ ನಮ್ಮಂತಹ ರಾಜಕಾರಣಿಗಳಲ್ಲಿ ಆಗ್ರಹ ಏನಿರುವುದು ಅಂದ್ರೆ ಹಂತಕರಿಗೆ ಕಠಿಣ ಶಿಕ್ಷೆ ಕೊಡ್ಬೇಕು.
ಗಲ್ಲು ಶಿಕ್ಷೆ ಕೊಡ್ತೀರಾದ್ರೂ ಓಕೆ ನಮಗೆ ಬೇಜಾರಿಲ್ಲ ಎಂಬ ಮಾತಿನಲ್ಲಿ ಭಾವೋದ್ರೇಕ ಎದ್ದು ಕಾಣಿಸುತ್ತಿತ್ತು.
ಇನ್ನು ಮುಂದೆಯಾದ್ರೂ ಇಲ್ಲಿ ಶಾಂತಿ ಇರಬೇಕು. ಇಲ್ಲಿ ಯಾವ ರಾಜಕಾರಣಿಗಳ, ಶಾಸಕರ ಮಕ್ಕಳ ಹತ್ಯೆ ಆಗಿಲ್ಲ. ಮಂತ್ರಿಗಳ ಮಕ್ಕಳ ಹತ್ಯೆ ಆಗಿಲ್ಲ.
ಸಂಘಟನೆಗಳ ಹೆಸರಿನಲ್ಲಿ ಅಮಾಯಕ ಯುವಕರನ್ನು ದುರುಪಯೋಗ ಪಡ್ಕೊಳ್ತಿದ್ದಾರೆ. ಆ ಮಕ್ಕಳ ಹೆತ್ತ ಕರುಳು ಸಂಕಟ ಪಡ್ತಿದೆ. ಪ್ರಾಮಾಣಿಕವಾಗಿ ಎಷ್ಟು ಸ್ಪಂದಿಸಿದ್ದಾರೆ ಅನ್ನುವಂತದ್ದು ಕುಟುಂಬಗಳಿಗೆ ಅನುಮಾನ.
ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾನು ಮನವಿ ಮಾಡ್ತೇನೆ. ಈ ಕರಾವಳಿ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಕೊಡೋದಿಕ್ಕಿಂತ ಹೆಚ್ಚಿನ ರೀತಿಯಲ್ಲಿ ಎರಡೂ ಪಕ್ಷಗಳ ಶಾಸಕರನ್ನು ಹಲವಾರು ಬಾರಿ ಆಯ್ಕೆ ಮಾಡಿದ್ದಾರೆ. ಸಿದ್ಧರಾಮಯ್ಯನವರ ಕಾಲದಲ್ಲಿ 5 ವರ್ಷಗಳ ಸರ್ಕಾರ. ಅವರ ಕಾಲದಲ್ಲಿ 5 ವರ್ಷ ಖಾದರ್ ಮತ್ತು ರಮಾನಾಥ್ ರೈ ಇಲ್ಲಿ ಮಂತ್ರಿಗಳು.
ನಾನು ಕಾಂಗ್ರೆಸ್ ಪಕ್ಷಕ್ಕೆ ಏನು ಕೇಳಿಕ್ಕೆ ಇಷ್ಟ ಪಡ್ತೇನೆ ಅಂದ್ರೆ ಈಗ ಕಾನೂನಿನ ವೈಫಲ್ಯದ ಬಗ್ಗೆ ಏನು ಮಾತಾಡ್ತೀರಿ, ಸರ್ಕಾರ ಜನತೆಗೆ ರಕ್ಷಣೆ ಕೊಡ್ತಲ್ಲ ಅಂತ ಏನು ಹೇಳ್ತಿದ್ದೀರಿ, ನಿಮ್ಮ ಸರ್ಕಾರ ಇದ್ದಾಗ ಈ ಕರಾವಳಿಯ ಜನರಿಗೆ ನೀವು ಕೊಟ್ಟ ಕೊಡುಗೆ ಏನು.
ಮೈತ್ರಿ ಸರ್ಕಾರ ತೆಗೆದು ಬಿಜೆಪಿಯವರು ಬಂದಿದ್ದೀರಿ, ನಿಮ್ಮನ್ನು ಅಭ್ಯರ್ಥಿಗಳು ಗೆಲ್ಲಿಸಿದ್ದಾರೆ. ನೀವೇನು ಕೊಡುಗೆ ಕೊಡ್ತಿದ್ದೀರಿ.
ಮೊನ್ನೆ ನಾನು ಪತ್ರಿಕೆ ನೋಡಿದೆ ಯಾರೋ ಬಿಜೆಪಿ ಶಾಸಕರು ‘ಸುರತ್ಕಲ್ ಹತ್ಯೆ ವಿಷಯದಲ್ಲಿ ತನಿಖೆ ಸರಿಯಾಗಿ ಮಾಡಿಲ್ಲ ಅಂದ್ರೆ ಕಚೇರಿ ಎದುರು ಧರಣಿ ಕೂರ್ತೇವೆ, ಅಂದಿದ್ದಾರೆ.
ಒಬ್ಬ ಆಡಳಿತದ ಶಾಸಕನೇ ಈ ರೀತಿ ಹೇಳಿದಾಗ ಪಾಪ ಸಬ್ ಇನ್ಸ್‌ಪೆಕ್ಟರ್, ಸರ್ಕಲ್ ಇನ್ಸ್‌ಪೆಕ್ಟರ್ಸ್ ಎಲ್ಲ ಏನು ಮಾಡ್ತಾರೆ. ಇದಕ್ಕೆ ನಿಮಗೆ ಜನ ಓಟು ಕೊಟ್ರಾ? ಬಡಜನರ ಮನೆಯ ಮಕ್ಕಳನ್ನು ನರಮೇಧ ಮಾಡಿ ಅಂತ. ನಾನು 3 ತಿಂಗಳ ಮುಂಚೆನೇ ಹೇಳಿದೆ. ಯಾವ ರೀತಿ ಸಮಾಜ ಒಡೆಯುತ್ತೆ ಅನ್ನುವುದನ್ನು ಪ್ರಾರಂಭದಲ್ಲೇ ಹೇಳಿದ್ದೆ.
ಮಸೂದ್ ಹತ್ಯೆ ದೊಡ್ಡ ಪ್ರಚಾರ ಆಗ್ಲೇ ಇಲ್ಲ. ಪ್ರವೀಣ್‌ನ ಹತ್ಯೆವರೆಗೆ ಅದು ಸುದ್ದಿನೇ ಆಗಿಲ್ಲ. ಸಣ್ಣಪುಟ್ಟ ಯುವಕರನ್ನು ಬಳಕೆ ಮಾಡಿಕೊಳ್ಳುತ್ತೀರಿ, ಪರಿಹಾರ ಕೊಡ್ತೀರಿ, ಒಂದೆರಡು ಮಾತಾಡ್ತೀರಿ ಮತ್ತೆ ಹೋಗ್ತೀರಿ.
ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಏನೋ ದೊಡ್ಡ ಮಾಹಿತಿ ಕೊಡ್ಲಿಕ್ಕೆ ಬಂದದ್ದು ಅನ್ಕೊಂಡೆ. ಅಷ್ಟು ಜವಾಬ್ದಾರಿ ಇರೋರು ಆದ್ರೆ ಮೊನ್ನೆನೇ ಬರುತ್ತಿದ್ದರು.
ಬೆಂಗಳೂರಿನಲ್ಲಿ ಅಷ್ಟು ದೊಡ್ಡ ಘನಂದಾರಿ ಕೆಲಸ ಏನಿತ್ತು. ನನಗೆ ಯಾರ ಮುಲಾಜಿಲ್ಲ ಇಲ್ಲಿ. ಸಿಎಂಗಿಂತ ದೊಡ್ಡವರು ಇರಬಹುದು ಅವರು.
ಆದರೆ ಸಿಎಂ ಅವರಿಗೆ ನಾನೇ ಮ್ಯಾನೇಜ್ ಮಾಡಿ ಬರ್ತೇನೆ ಅಂತ ಏನಾದರೂ ಹೇಳಿದ್ರಾ? ಇವತ್ತು ಪಾಪ ನಮ್ ಫ್ಲೈಟ್‌ನಲ್ಲಿ ಬಂದ್ರು.
ನಾನು ಅವರು ಮೂರು ಹತ್ಯೆಯಾದ ಕುಟುಂಬಕ್ಕೆ ಭೇಟಿ ಕೊಟ್ಟು ಪೊಲೀಸ್ ಅಧಿಕಾರಿಗಳಿಗೆ ಸಲಹೆ ಕೊಡ್ತಾರೆ ಅಂತ ಯೋಚಿಸಿದ್ದೆ. ಆರ್‌ಎಸ್‌ಎಸ್ ಅಥವಾ ಇನ್ನೇನೋ ಅವರು ಏನು ಸೂಚನೆ ಕೊಟ್ಟಿದ್ದಾರೋ ಗೊತ್ತಿಲ್ಲ.
ಫಾಸಿಲ್ ತಂದೆ ಹಣವನ್ನೇ ನಿರಾಕರಿಸಿದರು. ಆದ್ರೆ ಮಗನ ಸಾವಿಗೆ ನ್ಯಾಯ ಕೊಡಿಸಿ ಅಂತ ಕೇಳ್ಕೊಂಡರು’ ಎಂದು ಹೇಳಿದರು.