ಬೆಳ್ತಂಗಡಿ : ಮದುವೆ ಸಂಭ್ರಮದಲ್ಲಿ ವಿಶೇಷವಾಗಿ ಯಕ್ಷಗಾನ ಪ್ರದರ್ಶನವಾಗುವುದನ್ನು ನಾವು ಕಂಡಿದ್ದೇವೆ. ಆದರೆ ಮದುವೆ ಬಳಿಕ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಗಾನ ವೈಭವ ಕಾರ್ಯಕ್ರಮದಲ್ಲಿ ಮದುಮಗನ ಚೆಂಡೆ ಪೆಟ್ಟಿಗೆ ಮದುಮಗಳೇ ನಾಟ್ಯ ಮಾಡಿದ್ದಾಳೆ.
ಇಂತಹ ಅಪೂರ್ವ ಕಾರ್ಯಕ್ರಮವೊಂದು ನಡೆದಿರೋದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಮದ್ದಡ್ಕ ಸಮೀಪದ ಮೈರಾರುವಿನಲ್ಲಿ. ಯಕ್ಷಗಾನ ಭಾಗವತಿಕೆಗೆ ಚೆಂಡೆ ಬಾರಿಸಿದ್ದು ಸುರೇಶ್ ಕೆರ್ಮುಣ್ಣಾಯರ ಪುತ್ರ , ಮದುಮಗ ಸುಹಾಸ್ ಅವರು. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದು ಮದುಮಗಳು ಕಟೀಲು ಎಕ್ಕಾರಿನ ಭಾಸ್ಕರ ರಾವ್ ಮತ್ತು ನಿರ್ಮಲಾ ಭಟ್ ಅವರ ಪುತ್ರಿ ಅನುಜ್ಞಾ ಸುಹಾಸ್. ಆಗಸ್ಟ್ 30ರಂದು ಇವರ ಮದುವೆ ಕಟೀಲಿನಲ್ಲಿ ಜರುಗಿತ್ತು. 31ರಂದು ಸುಹಾಸರ ಗೃಹಪ್ರವೇಶ ಮೈರಾರುವಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಗಾನವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 3 ಗಂಟೆಗಳ ಕಾಲ ಹಿರಿಯ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಅಜೇರು, ಮಹೇಶ ಮೊದಲಾವರ ಹಾಡುಗಾರಿಕೆ ನೆರೆದವರನ್ನು ಯಕ್ಷಲೋಕದತ್ತ ಕರೆದೊಯ್ದರೆ, ಖುದ್ದು ಮದುಮಗ ಸುಹಾಸ್ ಅವರು ಚೆಂಡೆ ಬಾರಿಸಿ ಸೈ ಅನ್ನಿಸಿಕೊಂಡರು. ಇದೇ ವೇಳೆ ಮದುಮಗಳು ಅನುಜ್ಞಾ ಅವರೂ ಕುಣಿದೇ ಬಿಟ್ಟರು.
ನೆರೆದವರು ಈ ಅದ್ಭುತ ಗಾನಮಾರ್ಧುರ್ಯಕ್ಕೆ ಮನಸೋತರು. ಸುಹಾಸ್ ಅವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರೆ, ಅನುಜ್ಞಾ ಮಂಗಳೂರಿನಲ್ಲಿ ಸಿಎ ವಿದ್ಯಾರ್ಥಿನಿ. ಕಟೀಲು ದುರ್ಗಾ ಮಕ್ಕಳ ಮೇಳದಲ್ಲಿ ರಾಜೇಶ್ ಅವರಿಂದ ನೃತ್ಯಾಭ್ಯಾಸ ಕಲಿತಿರುವ ಈಕೆ ಇದೀಗ ಹವ್ಯಾಸಿ ಕಲಾವಿದೆಯಾಗಿಯೂ ಆಗಿದ್ದಾರೆ. ಕೃಷ್ಣ, ಬಲರಾಮ, ಬಬ್ರವಾಹನ, ಜಾಂಬವಂತ ಹೀಗೆ ಯಾವುದೇ ಪಾತ್ರ ಮಾಡಲು ಸಿದ್ಧ ಎನ್ನುವ ಇವರ ದಾಂಪತ್ಯ ಜೀವನದೊಂದಿಗೆ ಕಲಾ ಬದುಕು ಸುಂದರವಾಗಲಿ.