ಮಂಗಳೂರು: ನಗರದ ಉಳಾಯಿಬೆಟ್ಟು ಪೆರ್ಮಾಂಕಿಯಿಂದ ಮಂಗಳೂರಿಗೆ ಬಸ್ಸಿಲ್ಲದೆ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆಗೆ ಮನವಿ ಮಾಡಿಕೊಂಡಿದ್ದರೂ ಕಿಲೋಮೀಟರ್ ಗಟ್ಟಲೆ ನಡೆಯೋದು ತಪ್ಪಿಲ್ಲ ಎಂದು ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು ನಗರದ ಕೇಂದ್ರ ಭಾಗದ ಅನತಿ ದೂರದಲ್ಲಿರುವ ಉಳಾಯಿಬೆಟ್ಟು ಪೆರ್ಮಾಂಕಿಯಿಂದ ನಗರಕ್ಕೆ ಕೊರೋನ ಹಾವಳಿಯ ಮೊದಲು 3 ಖಾಸಗಿ ಬಸ್ಸು ಓಡಾಡುತ್ತಿತ್ತು. ಆದರೆ ಇದೀಗ 3 ಬಸ್ಸಿನ ಸಂಚಾರವನ್ನೂ 10 ದಿನಗಳಿಂದ ನಿಲ್ಲಿಸಲಾಗಿದೆ ಮತ್ತು ಅದರ ಬದಲಿ ಯಾವುದೇ ಬಸ್ಸಿನ ವ್ಯವಸ್ತೆಯನ್ನೂ ಮಾಡಲಾಗಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ದೂರಿಕೊಂಡಿದ್ದಾರೆ.
ಇದೀಗ ಗ್ರಾಮದಲ್ಲಿ ಕೇವಲ ಒಂದು ಸರಕಾರಿ ಬಸ್ಸಿನ ಸಂಚಾರವಿದ್ದು, ಮಧ್ಯಾಹ್ನದ ವೇಳೆ ಯಾವುದೇ ಬಸ್ಸಿನ ಸಂಚಾರವಿಲ್ಲ.
ಆದಿತ್ಯವಾರವಂತೂ ಬಸ್ಸೇ ಬಾರದ ಕಾರಣ ಓಡಾಡಲು ಗ್ರಾಮಸ್ಥರು ಬಾಡಿಗೆ ರಿಕ್ಷಾ ಮಾಡಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.ರಿಕ್ಷಾ ಬಾಡಿಗೆ 150 ರಿಂದ 200 ರೂ ಇದ್ದು, ಬಡವರಿಗೆ ಕೊಡಲು ಕಷ್ಟಸಾಧ್ಯವಾಗಿದೆ. ಇದರಿಂದ ಹಲವು ಮಂದಿ ನಡೆದುಕೊಂಡೇ ಹೋಗಬೇಕಾಗಿದೆ.
ಮುಂದಿನ ಸೋಮವಾರದಿಂದ ತರಗತಿ ಪ್ರಾರಂಭವಾಗುವುದರಿಂದ ಮಕ್ಕಳಿಗೆ ಶಾಲೆಗೆ ಹೋಗಿ ಬರಲು ಕಷ್ಟವಾಗಲಿದ್ದು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿ ಇಂದು ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಸಂಸದರು, ಶಾಸಕರು,ದಕ್ಷಿಣ ಕನ್ನಡ ಜಿಲ್ಲಾಧಿಕಾರಿ,ಮತ್ತು ಸಾರಿಗೆ ಅಧಿಕಾರಿ( R.T.O) ಮತ್ತು ಬಸ್ ಮಾಲಕರನ್ನು ಭೇಟಿ ಮಾಡಿ ಊರಿನ ಜನತೆಯ ಸಮಸ್ಯೆ ತಿಳಿಸಿ, ಮನವಿಪತ್ರ ನೀಡಲಾಗಿದೆ.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ, ದಿನೇಶ್ ಕುಮಾರ್ ರ್ಪೆರ್ಮOಕಿ , ಬಿಜೆಪಿ ಉಳ್ಳಾಯಿಬೆಟ್ಟು ಶಕ್ತಿಕೇಂದ್ರ ಅಧ್ಯಕ್ಷರು ಕಮಲಾಕ್ಷ ತಲ್ಲಿಮಾರು, ಕಿಶೋರ್ ಶೆಟ್ಟಿ ಪೆರ್ಮoಕಿ ಹಾಜರಿದ್ದರು.