ವಿಟ್ಲ: ವಿಟ್ಲ ಠಾಣಾ ಎಸ್.ಐ ವಿನೋದ್ ಎಸ್. ರೆಡ್ಡಿಯವರನ್ನು ಉತ್ತರಕನ್ನಡ ಜಿಲ್ಲೆಯ ರಾಮನಗರ ಠಾಣೆಗೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ರವರು ಆದೇಶ ಹೊರಡಿಸಿದ್ದಾರೆ.
2012ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ವಿನೋದ್ ಎಸ್. ರೆಡ್ಡಿಯವರು ಆ ಬಳಿಕ ಮಂಗಳೂರು ಕೇಂದ್ರ ಸ್ಥಾನದಲ್ಲಿ ಪ್ರೊಬೆಷನರಿ ಎಸ್.ಐ. ಆಗಿ ಕರ್ತವ್ಯ ಆರಂಭಿಸಿದರು. ಬಳಿಕ ಉಡುಪಿ ಜೆಲ್ಲೆಯ ಹೆಜಮಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2019ರಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಪ್ರೊಬೆಷನರಿ ಎಸ್.ಐ ಆಗಿ ವರ್ಗಾವಣೆಗೊಂಡು ಬಂದಿದ್ದರು.ವಿಟ್ಲ ಠಾಣಾ ಎಸ್ ಐ ಆಗಿದ್ದ ಯಲ್ಲಪ್ಪರವರ ವರ್ಗಾವಣೆಗೊಂಡ ಬಳಿಕ ವಿನೋದ್ ಎಸ್. ರೆಡ್ಡಿರವರನ್ನು ವಿಟ್ಲ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವಿನೋದ್ ಎಸ್. ರೆಡ್ಡಿ ರವರು ಮೂಲತಃ ಬಾಗಲಕೋಟೆಯವರಾಗಿದ್ದು ಮೆಕ್ಯಾನಿಕಲ್ ಇಂಜಿನಿಯರ್ ಮುಗಿಸಿದ್ದಾರೆ. ಇತ್ತೀಚೆಗಷ್ಟೇ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್ ಮುಸ್ತಾಫ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್ ಮುಸ್ತಾಫ್ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.