ತೊಕ್ಕೊಟ್ಟು, ಮಾಂಸ ವ್ಯಾಪಾರದ ಸ್ಟಾಲ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು : ಎಸ್‌ಡಿಪಿಐ ಖಂಡನೆ, ಕ್ರಮಕ್ಕೆ ಆಗ್ರಹ
ಮಂಗಳೂರು: ಉಳ್ಳಾಲ ನಗರ ಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಮಾಂಸ ವ್ಯಾಪಾರದ ಶೆಡ್ದ್ ಗಳಿಗೆ ಬೆಂಕಿ ಹಚ್ಚಿದ ಕೃತ್ಯವನ್ನು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು(ಉಳ್ಳಾಲ)ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ ಖಂಡಿಸಿದ್ದಾರೆ.
ಕಳೆದ ನಲ್ವತ್ತು ವರ್ಷದಿಂದ ಇದೇ ಸ್ಥಳದಲ್ಲಿ ಮಾಂಸ ಹಾಗೂ ವಿವಿಧ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿದ್ದು ಇಲ್ಲಿನ ಹಳೇ ಕಟ್ಟಡವನ್ನು ನಿರ್ಣಾಮ ಮಾಡಿ ಹೊಸ ಕಟ್ಟಡ ಕಟ್ಟುವ ಯೋಜನೆಗೆ ಇಲ್ಲಿನ ನಗರ ಸಭೆ ಮುಂದಾಗಿದ್ದು ಈ ಸಂದರ್ಭದಲ್ಲಿ ಬೀಫ್ ಸ್ಟಾಲ್‌ಗಳ ಮಾಲೀಕರಿಗೆ ಪರ್ಯಾಯ ವ್ಯವಸ್ಥೆ ಇಲ್ಲದ ಅಥವಾ ಲಭಿಸದ ಕಾರಣದಿಂದ ಇಲ್ಲಿನ ಒಂದು ಬದಿಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದರು.
ಉಳಿದ ಎಲ್ಲಾ ವ್ಯಾಪಾರಸ್ಥರು ಪಕ್ಕದಲ್ಲಿರುವ ಖಾಸಗಿ ಸ್ಥಳಕ್ಕೆ ತಾತ್ಕಾಲಿಕ ಸ್ಥಳಾಂತರ ಮಾಡಿ ವ್ಯಾಪಾರ ನಡೆಸುತ್ತಾ ಇದ್ದಾರೆ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪಕ್ಷದ ಕಛೇರಿಗೆ ಬೆಂಕಿ ಹಚ್ಚುವುದು ಸೇರಿದಂತೆ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಇದರ ಹಿಂದೆ ಕೋಮು ಸೂಕ್ಮ ಪ್ರದೇಶವಾದ ದ.ಕ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸುವ ಷಡ್ಯಂತ್ರ ಅಡಗಿದೆ.
ಇಲ್ಲಿನ ಬಿಜೆಪಿ, ಸಂಘಪರಿವಾರದ ನಾಯಕರ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂಬ ಬಹಿರಂಗ ಹೇಳಿಕೆಗಳಿಂದ ಪ್ರಚೋದಿತರಾದ ಸಮಾಜ ವಿರೋಧಿ ಶಕ್ತಿಗಳು ಇಂತಹ ಕೃತ್ಯಗಳನ್ನು ನಡೆಸುತ್ತಿದೆ.
ಇದು ನಾಗರಿಕ ಸಮಾಜ ಒಪ್ಪುವಂತದಲ್ಲ ಇದನ್ನು ಎಸ್‌ಡಿಪಿಐ ಕಟು ಶಬ್ದಗಳಲ್ಲಿ ಖಂಡಿಸುತ್ತದೆ. ಇದರ ಹಿಂದಿರುವ ಸೂತ್ರದಾರಿಗಳನ್ನು ಕೂಡಲೇ ಬಂದಿಸಿ ಕಠಿಣ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕು.
ಅದೇ ರೀತಿ ಈ ಘಟನೆಯಿಂದ ಸಂತ್ರಸ್ತರಾದ ವ್ಯಾಪಾರಸ್ತರಿಗೆ ಸರಕಾರ ಸೂಕ್ತವಾದ ಪರಿಹಾರ ಹಾಗೂ ಭದ್ರತೆಯನ್ನು ಒದಗಿಸಬೇಕು ಎಂದು ಎಸ್‌ಡಿಪಿಐ ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿರುತ್ತಾರೆ.