ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಗ್ರಾಮದ ಸರ್ವೆ ನಂಬ್ರ 170 ರಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ (ಎಸ್.ಎಲ್.ಆರ್.ಎಂ) ನಿರ್ಮಿಸಬಾರದು ಎಂದು ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದರು. ಉದ್ದೇಶಿತ ಪ್ರದೇಶಕ್ಕೆ ಕಾಮಗಾರಿಗಾಗಿ ಬಂದ ಜೆಸಿಬಿ ತಡೆದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ತಗ್ಗರ್ಸೆ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕದ ಪ್ರದೇಶದಲ್ಲಿ ವಾಸದ ಮನೆ, ಶಾಲೆ, ಧಾರ್ಮಿಕ ಕೇಂದ್ರ, ಹೊಳೆ, ಅರಣ್ಯ ಪ್ರದೇಶವಾಗಿದ್ದು ಈ ಸ್ಥಳದಲ್ಲಿ ಘಟಕ ನಿರ್ಮಾಣ ಮಾಡುವುದು ಸೂಕ್ತವಲ್ಲ.
ಸರ್ವೆ ನಂಬ್ರ 170 ರಲ್ಲಿ 8.60 ಎಕ್ರೆ ಸ್ಥಳದ 100ಮೀಟರ್ ಸುತ್ತಳತೆಯಲ್ಲಿ ಮನೆಗಳಿದ್ದು, ಇಲ್ಲಿನ ಜನರಿಗೆ ತ್ಯಾಜ್ಯ ನಿರ್ವಹಣಾ ಘಟಕ ಮಾಡಿದಲ್ಲಿ ವಾಸನೆ, ಆರೋಗ್ಯ ಸಮಸ್ಯೆ, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಅಲ್ಲದೆ ಈ ಸ್ಥಳಕ್ಕೆ ಹೊಂದಿಕೊಂಡಿರುವ ಹೊಳೆ ನೀರು ಕಲುಷಿತಗೊಳ್ಳಲಿದೆ.
ಇನ್ನು ಈ ಸ್ಥಳದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಾಕಷ್ಟು ಮರಗಳಿದ್ದು ಅರಣ್ಯ ನಾಶವಾಗುತ್ತದೆ. ಸುತ್ತಲೂ ಕೃಷಿ ಭೂಮಿಯಿದ್ದು ಘನ ಮತ್ತು ದ್ರವ ತ್ಯಾಜ್ಯಗಳು ಭೂಮಿಗೆ ಸೇರಿ ಕೀಟಭಾದೆಗಳು ಉಂಟಾಗುವುದರಿಂದ ಬೆಳೆ ಹಾನಿಯಾಗಲಿದೆ ಎಂದು ಊರಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಯವರು ಭಾಗವಹಿಸಿ ಮಾತನಾಡಿ ‘ಬೈಂದೂರು ನೂತನ ಪಟ್ಟಣ ಪಂಚಾಯತ್ ತಾಜ್ಯ ವಿಲೇವಾರಿ ಘಟಕವನ್ನು ತಗ್ಗರ್ಸೆ ವಸ್ರೆಯಲ್ಲಿ ನಿರ್ಮಾಣ ಮಾಡುವ ಸಲುವಾಗಿ ಇಂದು ಕಾಮಗಾರಿ ನಡೆಸಲು ಮುಂದಾಗಿದ್ದು, ಇದರ ಬಗ್ಗೆ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಸಹ ಗಣನೆಗೆ ತೆಗೆದುಕೊಳ್ಳದೆ ತಮ್ಮಿಷ್ಟದಂತೆ ಎಸ್.ಎಲ್.ಆರ್ ಎಮ್ ಘಟಕವನ್ನು ನಿರ್ಮಾಣ ಮಾಡುತ್ತಿರುವುದು ಖಂಡನೀಯವಾಗಿದೆ.
ಈ ಕೂಡಲೇ ತಗ್ಗರ್ಸೆ ವಸ್ರೆಯಲ್ಲಿ ನಿರ್ಮಾಣ ಮಾಡುವ ಎಸ್ ಎಲ್ ಆರ್ ಎಮ್ ಘಟಕವನ್ನು ಕೈ ಬಿಡಬೇಕೆಂದು ಮಾನ್ಯ ಶಾಸಕರ ಮುಖೇನ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗುವುದು’ ಎಂದರು.
ಪಟ್ಟಣ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಮಾತನಾಡಿ ‘ಜಿಲ್ಲಾಧಿಕಾರಿಗಳ ಆದೇಶದಂತೆ ಅಮೃತನಗರ ಯೋಜನೆ ಅಡಿಯಲ್ಲಿ 8.6 ಎಕ್ರೆ ಭೂಮಿಯನ್ನು ಒಂದು ಕೋಟಿ ವೆಚ್ಚದಲ್ಲಿ ತಾಜ್ಯ ವಿಲೇವಾರಿ ಘಟಕದ ಸುತ್ತ ಕಾಂಪೌಂಡ್, ರಸ್ತೆ ನಿರ್ಮಾಣ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಣವನ್ನು ಕಾಯ್ದಿರಿಸಲಾಗಿದೆ.
ದಿನಕ್ಕೆ ಹತ್ತು ಟನ್ ನಷ್ಟು ಘನ ತಾಜ್ಯ ಉತ್ಪಾದನೆ ಆಗುತ್ತಿದ್ದು, ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ವ್ಯವಸ್ಥೆ ಮಾಡಬೇಕಾಗಿದೆ ಇದಕ್ಕೆ ಊರಿನ ಗ್ರಾಮಸ್ಥರು ಸಹಕರಿಸಿದರೆ ತುಂಬಾ ಉತ್ತಮ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ತಗ್ಗರ್ಸೆ ಗ್ರಾಮಪಂಚಾಯತ್ ಮಾಜಿ ಸದಸ್ಯ ಗೋಪಾಲ ಪೂಜಾರಿ, ಸ್ಥಳೀಯ ಅಕ್ಷಯ್ ತಗ್ಗರ್ಸೆ, ಗುಲಾಬಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.