ಲಂಚಬಾಕ ಜಲಮಂಡಳಿ ಅಧಿಕಾರಿಗಳ ದರ್ಬಾರ್: ಲಕ್ಷಾಂತರ ಹಣದೊಂದಿಗೆ ಎಸಿಬಿ ಬಲೆಗೆ
ವಿಜಯಪುರ: ಗುತ್ತಿಗೆದಾರರಿಗೆ ಕಾರ್ಮಿಕರ ಬಿಲ್ ಪಾವತಿಗಾಗಿ ಲಂಚ ಪಡೆಯುತ್ತಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಬ್ಬರು ಅಧಿಕಾರಿಗಳು ಲಕ್ಷಾಂತರ ಹಣದೊಂದಿಗೆ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಾರೆ.
ಕಾರ್ಮಿಕರನ್ನು ಒದಗಿಸಿದ ಲಕ್ಷಿ ಎಂಟರ್ಪ್ರೈಸ್ ನ ಅಶೋಕ ರಾಮಪ್ಪ ಪಾಟೀಲ ಇವರು ವಿಜಯಪುರ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಗುತ್ತಿಗೆ ಕಾರ್ಮಿಕರನ್ನು ಒದಗಿಸಿದ್ದರು. ಇದಕ್ಕಾಗಿ ಮಂಡಳಿಯಿಂದ ತನಗೆ ಬರಬೇಕಿದ್ದ ಬಾಕಿ ಬಿಲ್ ಕೊಡಲು ತೋರಿದ್ದರು.
ಆದರೆ ವಿಜಯಪುರ ಜಲ ಮಂಡಳಿ ಕಛೇರಿಯ ಲೆಕ್ಕ ಅಧೀಕ್ಷಕ ಎಂ.ಎಸ್. ಮದ್ದಾನಿಮಠ, ಎಇಇ ಜೆ.ಎಸ್. ಸಾಲಿಮಠ ಇವರು ಲಂಚಕ್ಕೆ ಬೇಡಿಕೆ ಇರಿಸಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಶೋಕ ಪಾಟೀಲ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕಾರ್ಮಿಕರನ್ನು ಗುತ್ತಿಗೆಗೆ ನೀಡುವ ಟೆಂಡರನ್ನು ಪಡೆದುಕೊಂಡಿದ್ದರು.
ಇದಕ್ಕಾಗಿ ಫೆಬ್ರವರಿ 2020 ನೇ ತಿಂಗಳಲ್ಲಿ ಕಾರ್ಮಿಕರನ್ನು ಪೂರೈಸಿದ ಬಿಲ್ 50 ಲಕ್ಷ ರೂ. ಚೆಕ್ ನೀಡಲು ಮಂಡಳಿಯ ಲೆಕ್ಕ ಅಧೀಕ್ಷಕ ಎಂ.ಎಸ್ ಮದ್ದಾನಿಮಠ ಎಂಬುವವರು ರೂ.50 ಸಾವಿರ ಹಣದ ಲಂಚಕ್ಕೆ ಬೇಡಿಕೆ ಇಟ್ಟು, ಬಿಲ್ ಪಾವತಿಸದೆ ಬಾಕಿ ಇರಿಸಿಕೊಂಡಿದ್ದರು. ಕಾರ್ಮಿಕರನ್ನು ಪೂರೈಸಿದ ಬಿಲ್ ಮಂಜೂರು ಮಾಡಿದ ಎಇಇ ಜೆ.ಎಸ್ ಸಾಲಿಮಠ 20 ಸಾವಿರ ರೂ. ಲಂಚದ ಹಣ ನೀಡುವಂತೆ ಒತ್ತಾಯಿಸಿದ್ದ.
ಈ ಹಿನ್ನೆಯಲ್ಲಿ ದೂರು ನೀಡಲಾಗಿತ್ತು. ಆರೋಪಿ ಅಧಿಕಾರಿಗಳು ಲಂಚದ ಹಣ ಪಡೆಯುತ್ತಿದ್ದಾಗಲೇ ದಾಳಿ ನಡೆಸಿ, ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಂಚ ಪಡೆದ 70 ಸಾವಿರ ರೂ. ಹಾಗೂ ಅವರ ವಶದಲ್ಲಿದ್ದ ಲೆಕ್ಕ ನೀಡಲಾಗದ 1,04,300 ರೂ. ಸೇರಿ ಒಟ್ಟು 1,74,300 ರೂ.ಗಳನ್ನು ಜಪ್ತ ಮಾಡಿದ್ದಾರೆ.