ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಹೃದಯ್ ನಾರಾಯಣ್ ದೀಕ್ಷಿತ್ ಅವರು ತುಂಡು ಉಡುಗೆ ಧರಿಸುವುದು ರಾಖಿ ಸಾವಂತ್ ಅವರನ್ನು ಮಹಾತ್ಮ ಗಾಂಧಿಯನ್ನಾಗಿ ಮಾಡಲಾರದು ಎಂದು ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉನ್ನಾವೊ ಜಿಲ್ಲೆಯ ಬಂಗರ್ಮಾವು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಘಟಕ ನಿನ್ನೆ ಆಯೋಜಿಸಿದ್ದ ‘ಬುದ್ಧಿಜೀವಿಗಳ ಸಮ್ಮೇಳನ’ದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಮಹಾತ್ಮ ಗಾಂಧಿ ಅವರು ತುಂಡು ಉಡುಗೆ ಧರಿಸುತ್ತಿದ್ದರು.
ಒಂದು ಧೋತಿಯನ್ನಷ್ಟೇ ಅವರು ಸುತ್ತುಕೊಳ್ಳುತ್ತಿದ್ದರು. ದೇಶವು ಅವರನ್ನು ಬಾಪು ಎಂದು ಕರೆದಿದೆ. ಬಟ್ಟೆಗಳನ್ನು ಕಳಚುವುದರಿಂದಷ್ಟೇ ಯಾರಾದರೂ ಮಹಾನ್ ವ್ಯಕ್ತಿಯಾಗಲು ಸಾಧ್ಯ ಎಂದಾದರೆ, ರಾಖಿ ಸಾವಂತ್ ಅವರು ಮಹಾತ್ಮ ಗಾಂಧಿ ಅವರಿಗಿಂತಲೂ ಶ್ರೇಷ್ಠರಾಗಿಬಿಡುತ್ತಿದ್ದರು’ ಎಂದು ದೀಕ್ಷಿತ್ ಹೇಳಿದ್ದಾರೆ.
ಅವರ ಈ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬಳಿಕ ಎಚ್ಚೆತ್ತ ಅವರು ಟ್ವಿಟ್ಟರ್ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ‘ನನ್ನ ಭಾಷಣದ ವಿಡಿಯೋ ತುಣುಕೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಕೆಲವು ಸ್ನೇಹಿತರು, ಅದಕ್ಕೆ ಬೇರೆ ಅರ್ಥ ನೀಡುತ್ತಿದ್ದಾರೆ.
ಉನ್ನಾವೋದಲ್ಲಿ ನಡೆದ ‘ಪ್ರಬುದ್ಧ ಸಮ್ಮೇಳನ’ದಲ್ಲಿನ ನನ್ನ ಭಾಷಣದ ಭಾಗವಿದು. ಸಮ್ಮೇಳನದ ಆಯೋಜಕರು ನನ್ನನ್ನು ಪ್ರಬುದ್ಧ ಬರಹಗಾರ ಎಂದು ಪರಿಚಯಿಸಿದ್ದರು. ಅದಕ್ಕಾಗಿ ಈ ಪ್ರತಿಕ್ರಿಯೆ ನೀಡಿದ್ದೆ’ ಎಂದಿದ್ದಾರೆ.