ಲಕ್ನೋ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದ್ದು,
ಘಟನಾ ಸ್ಥಳಕ್ಕೆ ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇದರ ಜೊತೆ ಅಖಿಲೇಶ್ ಯಾದವ್ ಅವರನ್ನು ಬಂಧಿಸಿದೆ.
ಭಾನುವಾರ ಲಖಿಂಪುರ್ ಖೇರಿಗೆ ತೆರಳುತ್ತಿದ್ದ ಪ್ರಿಯಾಂಕಾ ಅವರನ್ನು ಸೀತಾಪುರದ ಹರಗಾಂವ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಪ್ರಿಯಾಂಕಾ ಗಾಂಧಿ ಮತ್ತು ಮಹಿಳಾ ಕಾನ್ಸ್ಟೇಬಲ್ ನಡುವೆ ಮಾತಿನ ಚಕಮಕಿ ನಡೆದಿದ್ದು,
ನಂತರ ಪ್ರಿಯಾಂಕಾ ಗಾಂಧಿಯನ್ನು ಜಿಲ್ಲಾ ಪಿಎಸಿ ಕಚೇರಿಗೆ ಕರೆದೊಯ್ಯಲಾಯಿತು ಎಂದು ಕಾಂಗ್ರೆಸ್ ತಿಳಿಸಿದೆ.
ಇದರ ಜೊತೆಗೆ ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್ ಅವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಲಖಿಮ್ಪುರ್ ಖೇರಿಯಲ್ಲಿ ನಿನ್ನೆ ನಡೆದ ಹಿಂಸಾಚಾರ ಪ್ರಕರಣವನ್ನ ಖಂಡಿಸಿರುವ ಅಖಿಲೇಶ್ ಯಾದವ್ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು.
ಈ ಬಗ್ಗೆ ಎಚ್ಚೆತ್ತ ಉತ್ತರ ಪ್ರದೇಶ ಸರ್ಕಾರ ಅವರನ್ನ ಗೃಹ ಬಂಧನದಲ್ಲಿ ಇರಿಸಿತ್ತು.
ಇದರಿಂದ ಕೆರಳಿದ ಅಖಿಲೇಶ್ ಯಾದವ್,
ತಮ್ಮ ನಿವಾಸ ಎದುರೇ ಧರಣಿ ಕೂತಿದ್ದರು. ಈ ಸಂದರ್ಭದಲ್ಲಿ ಸಮಾಜವಾದಿ ಕಾರ್ಯಕರ್ತರು ಯಾದವ್ ಮನೆ ಮುಂದೆ ನಿಂತಿದ್ದ ಪೊಲೀಸ್ ವಾಹನಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು.
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಧರಣಿ ನಿರತ ಅಖಿಲೇಶ್ ಹಾಗೂ ಶಿವಪಾಲ್ ಯಾದವ್ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.