ಬೆಂಗಳೂರು: ಚಲನಚಿತ್ರಗಳ ಶೂಟಿಂಗ್‌ಗೆ ಬಳಕೆ ಮಾಡುತ್ತಿದ್ದ ಕಾರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪಾರ್ಟ್‌ಮೆಂಟ್‌ವೊಂದರ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನಿಂದ ದುರ್ವಾಸನೆ ಬರುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ತೆರಳಿದ ಮಾಗಡಿ ರಸ್ತೆ ಪೊಲೀಸರು ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಕಾರಿನಲ್ಲಿ ಸುಮಾರು 35ರಿಂದ 40 ವರ್ಷ ವಯೋಮಾನದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಬಳಿ ಆಧಾರ್ ಕಾರ್ಡ್ ದೊರೆತಿದ್ದು, ಅದರಲ್ಲಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಈ ವ್ಯಕ್ತಿಯ ಮಾಹಿತಿ ತನಿಖೆಯಲ್ಲಿ ಗೊತ್ತಾದರೆ ಆ ಮೂಲಕ ಸತ್ತ ವ್ಯಕ್ತಿಯ ಮಾಹಿತಿಯನ್ನು ಕಲೆ ಹಾಕಲು ಸುಲಭವಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಬಾಸಿಡರ್ ಕಾರನ್ನು ಸಿನಿಮಾ ಚಿತ್ರೀಕರಣಕ್ಕೆ ಬಳಕೆ ಮಾಡಲಾಗುತ್ತಿತ್ತು. ಹೀಗಾಗಿಯೇ ಅದಕ್ಕೆ ಬಣ್ಣ ಬಳಿದು ಡಿಸೈನ್ ಮಾಡಲಾಗಿತ್ತು. ಅದರ ಮಾಲೀಕರು ಮನೆ ಖಾಲಿ ಮಾಡಿಕೊಂಡು ಹೋಗಿದ್ದು, ಕಾರನ್ನು ರಸ್ತೆ ಪಕ್ಕ ನಿಲ್ಲಿಸಿ ಹೋಗಿದ್ದರು. ಸುಮಾರು ತಿಂಗಳಿಂದ ಅದು ಅಲ್ಲಿಯೇ ಇತ್ತು.
ಕಾರಿನ ಡೋರ್‌ಗಳು ಲಾಕ್ ಆಗಿರಲಿಲ್ಲ. ಕಾರಿನಲ್ಲಿ ಮದ್ಯದ ಪಾಕೆಟ್‌ಗಳು ಪತ್ತೆಯಾಗಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ವರದಿ ಬಂದ ಬಳಿಕ ಆತನ ಸಾವು ಹೇಗೆ ಸಂಭವಿಸಿತು ಎಂಬುದರ ಸ್ಪಷ್ಟತೆ ಸಿಗಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ಹೇಳಿದರು.