ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿ ಅಂಗವಾಗಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಕುಸಿದು ಬಿದ್ದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಪೆರಿಯಾ ಎಂಬಲ್ಲಿ ನಡೆದಿದೆ.
ಶನಿವಾರ ಮುಂಜಾನೆ ಸುಮಾರು 3 ಗಂಟೆಗೆ ಮೇಲ್ಸೇತುವೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಐದು ಮಂದಿ ಕಾರ್ಮಿಕರು ಮೇಲ್ಸೇತುವೆಯ ಕಾಂಕ್ರೀಟ್ ಕೆಲಸದಲ್ಲಿ ನಿರತರಾಗಿದ್ದರು.
ಸೇತುವೆ ಕುಸಿತದಿಂದ ಕಾರ್ಮಿಕನೋರ್ವನಿಗೆ ಸಣ್ಣಪುಟ್ಟ ಗಾಯಗೊಂಡಿರುವುದಾಗಿ ಮಾಹಿತಿಯಿದೆ. ನಿರ್ಮಾಣ ಕಾಮಗಾರಿಯಲ್ಲಿನ ಲೋಪ ದೋಷಗಳು ಮೇಲ್ಸೇತುವೆ ಕುಸಿಯಲು ಕಾರಣವೆಂದು ಶಂಕಿಸಲಾಗಿದೆ.
ಘಟನೆಯ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೇಘಾ ಕನ್‌ಸ್ಟ್ರೇಕ್ಷನ್ ಕಂಪೆನಿಯು ಕಾಸರಗೋಡಿನ ಚೆಂಗಳದಿಂದ ನೀಲೇಶ್ವರ ತನಕದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದೆ.
ಮೂರು ಪಾಳಿಗಳಲ್ಲಿ ದಿನದ 24 ಗಂಟೆಗಳ ಕಾಲವೂ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಪಿಲ್ಲರ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ಸ್ಲ್ಯಾಬ್ ಕಾಮಗಾರಿ ನಡೆಯುತ್ತಿರುವಂತೆಯೇ ಕುಸಿದು ಬಿದ್ದಿದೆ.