ಮಂಗಳೂರು/ಬೆಂಗಳೂರು : ಎಟಿಎಂನಿಂದ ಹಣ ದೋಚಲು ಯತ್ನಿಸಿ ವಿಫಲವಾದ ಖದೀಮರು ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಘಟನೆ ಬೆಂಗಳೂರಿನ ವಡ್ಡರಪಾಳ್ಯದಲ್ಲಿ ನಡೆದಿದೆ. ಬ್ಯಾಂಕಿನ ಎಟಿಎಂಗೆ ಬಂದಿದ್ದ ಇಬ್ಬರು ಕಳ್ಳರು, ಎಟಿಎಂನಲ್ಲಿದ್ದ ಹಣ ದೋಚಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದೆ ಹೋದಾಗ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿದ್ದಾರೆ. ಇದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಯಂತ್ರ ಬಿಟ್ಟು ಪರಾರಿ:
ಯಂತ್ರ ಹೊತ್ತೊಯ್ದಿದ್ದ ಕಳ್ಳರು ಜನ ಸಂಚಾರ ಕಡಿಮೆಯಿದ್ದ ಮಂಚನಹಳ್ಳಿ ಸಮೀಪದ ನೀಲಗಿರಿ ತೋಪಿಗೆ ಬಂದಿದ್ದಾರೆ. ಆಕ್ಸಲ್ ಬ್ಲೇಡ್ ಬಳಸಿ ಯಂತ್ರ ತುಂಡರಿಸಿ ಹಣ ದೋಚಲು ಯತ್ನಿಸಿದ್ದಾರೆ. ಆದರೆ, ಅದು ವಿಫಲವಾಗಿದೆ.
ಜನಸಂಚಾರ ಆರಂಭವಾಗುತ್ತಿದ್ದ ಭಯಗೊಂಡ ದುಷ್ಕರ್ಮಿಗಳು ಯಂತ್ರವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಎಟಿಎಂ ಯಂತ್ರದಲ್ಲಿ 10 ಲಕ್ಷಕ್ಕೂ ಅಧಿಕ ಹಣವಿತ್ತು ಎಂದು ತಿಳಿದುಬಂದಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ ಅತ್ತಿಬೆಲೆ ಪೊಲೀಸರು.
ಉಪ್ಪಿನಂಗಡಿ : ದಕ್ಷಿಣ ಕಾಶಿ, ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಉಪ್ಪಿನಂಗಡಿ ಪಟ್ಟಣದ ಪೂರ್ವಕ್ಕೆ ನೇತ್ರಾವತಿ ನದಿ ತಟಕ್ಕೆ ಹತ್ತಿರದಲ್ಲಿ ನಿತ್ಯಹರಿದ್ವರ್ಣದ ಸಸ್ಯ ರಾಶಿಯ ನಡುವೆ ಕಂಗೊಳಿಸುವ ಕ್ಷೇತ್ರ ಪದಾಳ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ. ಸಹಸ್ರಾರು ವರ್ಷಗಳ ಹಿಂದೆ ಲೋಕ ಸಂಚಾರಿಗಳಾಗಿದ್ದ ಶ್ರೇಷ್ಠ ಋಷಿ ಮುನಿಗಳು ನೇತ್ರಾವತಿ ನದೀ ತೀರದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಲೌಕಿಕ ಶಕ್ತಿ ಹಾಗೂ ಶ್ರೀಸುಬ್ರಹ್ಮಣ್ಯನ ಸಾನ್ನಿಧ್ಯವಿರುವುದನ್ನು ಗುರುತಿಸಿದ, ಮಹಾತ್ಮರು ಶ್ರೀ ಸ್ವಾಮಿಯನ್ನು ಇಂದಿನ ಪದಾಳದಲ್ಲಿ ಸ್ಥಾಪಿಸಿದರೆಂಬುದು ಐತಿಹ್ಯ.
ದೇವಾಲಯ ಕಟ್ಟಿಸಿದ ಕದಿಕ್ಕಾರು ರಾಣಿ :
ಕಾಲಾಂತರದಲ್ಲಿ ಸ್ಥಳೀಯ ಕದಿಕ್ಕಾರು ಬೀಡಿನ ರಾಣಿಯೊಬ್ಬಳು ಪುತ್ರ ಸಂತಾನದ ಅಪೇಕ್ಷೆಯುಳ್ಳವಳಾಗಿ ಶ್ರೀ ದೇವರಿಗೆ ದೇವಸ್ಥಾನ ಕಟ್ಟಿಸುವ ಹರಕೆಯನ್ನು ಹೊತ್ತು, ಸಂಕಲ್ಪವನ್ನು ಪೂರೈಸಿದ ಮೇಲೆ ವೇದ ವಿದ್ವಾಂಸರಾದ ಬ್ರಾಹ್ಮಣ ಅರ್ಚಕರೊಬ್ಬರನ್ನು ದೇವಸ್ಥಾನದ ಉಸ್ತುವಾರಿ ಹಾಗೂ ದೇವರ ನಿತ್ಯಪೂಜೆಗಾಗಿ ನೇಮಿಸಿದಳಂತೆ. ಶ್ರೀ ದೇವರ ಅರ್ಚಕನಾದ ಆ ಬ್ರಾಹ್ಮಣನು ದೇವಸ್ಥಾನದ ನಿತ್ಯ ನೈಮಿತ್ತಿಕಗಳೊಂದಿಗೆ ಅಲ್ಲೇ ಸಮೀಪದಲ್ಲಿ ‘ಮಠ’ವೊಂದನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದುದರಿಂದ ಆ ಪ್ರದೇಶವು ‘ಮಠ’ವೆಂದೇ ಖ್ಯಾತವಾಯಿತು.
ಬ್ರಾಹ್ಮಣ ಬ್ರಹ್ಮರಾಕ್ಷಸನಾಗಿ ಉಪಟಳ :
ದೇವಸ್ಥಾನ ಹಾಗೂ ಮಠದ ಖರ್ಚು ವೆಚ್ಚಗಳು ಅಧಿಕವಾದಾಗ ತನ್ನನ್ನು ನೇಮಿಸಿದ ರಾಣಿಯಲ್ಲಿ ನೆರವನ್ನು ಯಾಚಿಸಿದಾಗ ಬ್ರಾಹ್ಮಣನಿಗೆ ಅವಮಾನ ಮಾಡಿದ್ದರಿಂದ ಮನನೊಂದು ಅಪಮೃತ್ಯುವಿಗೆ ಈಡಾಗಿ ಮೋಕ್ಷ ಸಿಗದೆ ಬ್ರಹ್ಮರಾಕ್ಷಸನಾಗಿ, ಪರಿಸರದಲ್ಲಿ ಉಪಟಳ ನೀಡುತ್ತಿರುವ ವಿಚಾರವು ಇತ್ತೀಚೆಗೆ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ವಿಷಯವಾಗಿದೆ.
ಕದಿಕ್ಕಾರು ಬೀಡಿನ ಅರಸೊತ್ತಿಗೆಯು ಸಮಾಪ್ತಿಯಾದ ಮೇಲೆ ದೇವಾಲಯವು ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನಕ್ಕೆ ಬಂದು ನಿತ್ಯ ಪೂಜಾದಿ ಕಾರ್ಯಗಳು ನಡೆಯುತ್ತಿದ್ದವು. ಕ್ರಿ ಶ. 1923ರಲ್ಲಿ ಈ ದೇವಾಲಯವು ಅಗ್ನಿಗೆ ಆಹುತಿಯಾಗಿ ದೇವಾಲಯವು ನಾಶವಾಗುವುದರೊಂದಿಗೆ ಪೂಜಾದಿ ಕಾರ್ಯಗಳು ನಿಂತುಹೋದವು. ಸುತ್ತಮುತ್ತಲಿನ ಜಮೀನುಗಳ ಒಡೆತನವು ಯಾರ್ಯಾರಿಗೋ ಸೇರಿ ದೇವಸ್ಥಾನವು ಕಾಡು ಪಾಲಾಯಿತು.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಸತ್ಯ!
ಮುಂದೆ ಈ ದೇವಸ್ಥಾನದ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಡುಸಾರು ಕುಟುಂಬದವರು ಖರೀದಿಸಿದಾಗ, ದೇವಸ್ಥಾನದ ಪಳೆಯುಳಿಕೆಗಳ ಮಾಹಿತಿ ಪಡೆದು ಊರ ಹತ್ತು ಸಮಸ್ತರ ಸಹಕಾರದಿಂದ ಕ್ರಿ. ಶ. 1993ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ, ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ‘ಪದಾಳ’ಕ್ಕಿರುವ ಸಂಬಂಧವು ತಿಳಿದುಬಂದಂತೆ ಧರ್ಮಾಧಿಕಾರಿಗಳ ಸಲಹೆ ಸೂಚನೆ ಪಡೆದು ಜೀರ್ಣೋದ್ಧಾರಕ್ಕೆ ಪ್ರಾರಂಭಿಸಲಾಯಿತು.
ದೇವಸ್ಥಾನದ ‘ಪರಂಬೋಕು’ ಎಂದು ದಾಖಲಿಸಲ್ಪಟ್ಟ 0.96 ಎಕ್ರೆ ಜಮೀನಿನಲ್ಲಿ ಊರ ಪರವೂರ ದಾನಿಗಳ ಸಹಕಾರದಿಂದ ಮತ್ತೆ ದೇವಸ್ಥಾನವು ಮನನಿರ್ಮಾಣಗೊಂಡು ಕ್ರಿ. ಶ. 2009ರಲ್ಲಿ ಶ್ರೀ ದೇವರ ಪುನರ್‌ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ನಂಬಿದವರ ಕೈ ಬಿಡದ ಸುಬ್ರಹ್ಮಣ್ಯ ಸ್ವಾಮಿ :
ಶ್ರೀ ದೇವರಿಗೆ ಬ್ರಹ್ಮಕಲಶ ನಡೆದು ಈಗಾಗಲೇ ಹದಿನೈದು ವರ್ಷಗಳಾಗಿದ್ದು, ಸಾನ್ನಿಧ್ಯ ವೃದ್ಧಿಗಾಗಿ ಅಷ್ಠಬಂಧ ಬ್ರಹ್ಮಕಲಶ ನಡೆಸುವ ಉದ್ದೇಶದಿಂದ ಪ್ರಶ್ನಾಚಿಂತನೆ ನಡೆಸಿದಾಗ ಸನ್ನಿಧಾನದ ಅಭಿವೃದ್ಧಿಗೆ ತೊಡಕಾಗಿರುವ ಬ್ರಹ್ಮರಾಕ್ಷಸನಿಗೆ ಮೋಕ್ಷವಾಗುವ ತನಕ ಆತನಿಂದ ಊರಿನಲ್ಲಿ ವಿಘ್ನಗಳು ಕಾಣಿಸಿಕೊಳ್ಳಬಹುದಾದ ಕಾರಣಕ್ಕಾಗಿ ಆತನನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಕೊಡುವಂತೆ ಚಿಂತನೆಯಲ್ಲಿ ಕಂಡು ಬಂದುದರಿಂದ ಈಗಾಗಲೇ ಕಾರ್ಯವನ್ನು ಮುಗಿಸಿ ಬ್ರಹ್ಮರಾಕ್ಷಸನ ಪ್ರತಿಷ್ಠಾಪನೆಯಾಗಿರುತ್ತದೆ. ಕ್ಷೇತ್ರಕ್ಕೆ ಸಂಬಂಧಿಸಿದ ದೈವಗಳಿಗೆ ಗುಡಿ ಕಟ್ಟಿ ಕಾಲ ಕಾಲಕ್ಕೆ ನೇಮಗಳನ್ನು ಕೊಡಲಾಗುತ್ತಿದ್ದು, ಸದ್ಯವೇ ಶ್ರೀ ದೇವರ ಬಿಂಬಕ್ಕೆ ಬೆಳ್ಳಿಯ ಕವಚವನ್ನು ಮತ್ತು ದೈವಗಳ ಭಂಡಾರಕ್ಕೆ ಪಲ್ಲಕ್ಕಿಯನ್ನು ಸಮರ್ಪಿಸಲಾಗುತ್ತದೆ. ಸುಂದರ ಆಲಯದೊಳಗೆ ಮಯೂರವಾಹನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿದ್ದಾನೆಂಬ ನಂಬಿಕೆಯಿಂದ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ನಂಬಿದ ಭಕ್ತರ ಕೈಬಿಡದ ದೇವರೆಂಬ ಖ್ಯಾತಿಯಿದೆ.
ಮತ್ತೆ ನಡೆಯಲಿದೆ ವಿಜೃಂಭಣೆಯ ಬ್ರಹ್ಮಕಲಶೋತ್ಸವ :
ಪುತ್ತೂರಿನ ಉಪ್ಪಿನಂಗಡಿ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.18ರಿಂದ ಡಿ.23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ಭಟ್ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.
ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್ಟ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಉಪಾಧ್ಯಕ್ಷ ಸುರೇಶ್ ಅತ್ರಮಜಲು, ಕಾರ್ಯದರ್ಶಿ ಕೇಶವ ಗೌಡ ರಂಗಾಜೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿಕಿಂಡೋವು, ಜತ್ತಪ್ಪನಾಯ್ಕ ಬೊಳ್ಳಾವು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗಿರೀಶ್ ಆರ್ತಿಲ, ಸುನೀಲ್ ಕುಮಾರ್ ದಡ್ಡು, ವಸಂತ ನಾಯ್ಕ ಬೊಳ್ಳಾವು, ಧರ್ನಪ್ಪ ನಾಯ್ಕ ಬೊಳ್ಳಾವು, ಪ್ರಶಾಂತ್ ಪೆರಿಯಡ್ಕ, ಕಂಗ್ವೆ ವಿಶ್ವನಾಥ ಶೆಟ್ಟಿ, ವಸಂತ ಕುಕ್ಕುಜೆ, ವೀರಪ್ಪಗೌಡಪುಳಿತ್ತಡಿ, ರಾಧಾಕೃಷ್ಣ ಭಟ್ ಬೊಳ್ಳಾವು, ಮಹಾಲಿಂಗೇಶ್ವರ ಭಟ್ ಮಧುವನ, ರಘು ಪೂಜಾರಿ, ಜಯಂತ ಪೊರೋಳಿ, ರಾಮಚಂದ್ರ ಭಟ್ ಕಲ್ಲಾಜೆ, ವೆಂಕಟ್ರಮಣ ಭಟ್ ಮುಂಚಿಕ್ಕಾನ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು/ಬೆಂಗಳೂರು : ನಗರ ಪ್ರದೇಶಗಳಲ್ಲಿ ಜನರು ತಮ್ಮ ಸಾಕು ನಾಯಿಗಳನ್ನು ಉದ್ಯಾನವನಗಳಿಗೆ ಕೊಂಡೊಯ್ಯೋದು ಸಾಮಾನ್ಯ ಸಂಗತಿ. ಆದರೆ, ಈಗ ಹೈಕೋರ್ಟ್ ಹೊಸಮಾರ್ಗಸೂಚಿ ಹೊರಡಿಸಿದೆ. ನಗರ ಪ್ರದೇಶಗಳಲ್ಲಿನ ಉದ್ಯಾನವನಗಳ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವು ಮಾರ್ಗ ಸೂಚಿಗಳನ್ನು ಹೈಕೋರ್ಟ್ ರಚಿಸಿದ್ದು, ಉದ್ಯಾನವನಗಳಲ್ಲಿ ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವ ನಾಯಿಗಳ ಮಾಲಕರಿಗೆ ಹೆಚ್ಚಿನ ದಂಡ ವಿಧಿಸುವಂತೆ ಸೂಚನೆ ನೀಡಿದೆ. ಉದ್ಯಾನವನಗಳಲ್ಲಿ ಸಾಕು ನಾಯಿಗಳಿಂದ ಆಗುತ್ತಿರುವ ಮಲ ವಿಸರ್ಜನೆಗೆ ಕಡಿವಾಣ ಹಾಕುವಂತೆ ಸರಕಾರಕ್ಕೆ ಸೂಚನೆ ನೀಡ ಬೇಕೆಂದು ಕೋರಿ ಕ್ಯೂಪ ಸಂಘಟನೆ ಅಂದರೆ ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಅಕ್ಷನ್ ಎಂಬ ಸರಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಉದ್ಯಾನವನಗಳ ಸ್ವಚ್ಛತೆ ಕುರಿತಂತೆ ಕೆಲವು ಮಾರ್ಗಸೂಚಿಗಳನ್ನು ರಚಿಸಿ ಆದೇಶಿಸಿದೆ.
ಉದ್ಯಾನವನ ಪ್ರದೇಶ ಮತ್ತು ಅದರ ಆವರಣದಲ್ಲಿ ಉಗುಳುವುದು, ಕಸ ಬಿಸಾಕುವುದು, ಸಾಕು ಪ್ರಾಣಿಗಳ ಮಲ ವಿಸರ್ಜನೆಗೆ ಅವಕಾಶ ಮಾಡುವವರನ್ನು ನಿಯಂತ್ರಿಸಿ ಸ್ವಚ್ಚತೆಯನ್ನು ಕಾಯ್ದುಕೊಳ್ಳುವುದು ಮತ್ತು ಅದನ್ನು ಉಲ್ಲಂಘಿಸುವವರ ವಿರುದ್ಧ ದಂಡವನ್ನು ವಿಧಿಸುವ ಕಾರ್ಯವನ್ನು ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಜವಾಬ್ದಾರಿಯಾಗಿರಲಿದೆ ಎಂದು ಹೈಕೋರ್ಟ್ ಹೇಳಿದೆ. ಸಾರ್ವಜನಿಕ ಉದ್ಯಾನವನಗಳಿಗೆ ಸಾಕು ನಾಯಿಗಳನ್ನು ಕರೆತರುವ ಪೋಷಕರು ಅದು ವಿಸರ್ಜನೆ ಮಾಡುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕೈ ಚೀಲಗಳನ್ನು ತೆಗೆದುಕೊಂಡು ಬರಬೇಕು ಎಂಬ ಜಾಗೃತಿ ಮೂಡಿಸ ಬೇಕಾದ ಅಗತ್ಯವಿದ್ದು, ನಾಯಿಗಳ ವಿಕೃತ ನಡೆಯಿಂದ ಉದ್ಯಾನವಕ್ಕೆ ಭೇಟಿ ನೀಡುವವರಿಗೆ ರಕ್ಷಣೆ ನೀಡಬೇಕಾಗಿದೆ. ಅಲ್ಲದೆ, ಸಾರ್ವಜನಿಕ ಉದ್ಯಾನವನಗಳಲ್ಲಿ ಎಲ್ಲ ರೀತಿಯ ಸ್ವಚ್ಛತೆ ಕಾಯ್ದುಕೊಳ್ಳುವುದು ಕಡ್ಡಾಯವಾಗಿರಬೇಕಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ತೋಟಗಾರಿಕೆ ಇಲಾಖೆಯ ಒಬ್ಬ ಅಧಿಕಾರಿ ಮತ್ತು ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ತಂಡವನ್ನು ರಚಿಸಿ, ಕಾಲ ಕಾಲಕ್ಕೆ ನಗರದ ಎಲ್ಲ ಪ್ರಮುಖ ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸ್ವಚ್ಛತೆಗೆ ಸಂಬಂಧಿಸಿದಂತೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಸಂಬಂಧದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಮಂಗಳೂರು/ಮುಂಬೈ : 2025ರ ಐಪಿಎಲ್ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆದರೆ ಇಡೀ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆದಿದ್ದು ಮಾತ್ರ, ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಈ ಮಹಿಳೆ.
ಇಂಡಿಯನ್ ಪ್ರೀಮಿಯರ್ ಲೀಗ್-2025ರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದಿದ್ದು, ಬಹಳ ಕುತೂಹಲ ಕೆರಳಿಸಿತ್ತು. ಕೆಲವು ಆಟಗಾರರನ್ನು ಕೋಟಿ ಬೆಲೆಯಲ್ಲಿ ತಂಡಗಳು ಖರೀದಿಸಿದರೆ, ಇನ್ನೂ ಕೆಲವು ಆಟಗಾರರು ಅನ್ ಸೋಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಈ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಮಹಿಳೆ ಹೆಚ್ಚು ಗಮನ ಸಳೆದಿದ್ದಾರೆ.
ಆ ಮಹಿಳೆಯ ಹೆಸರು ಮಲ್ಲಿಕಾ ಸಾಗರ್. ಮೂಲತಃಹ ಮುಂಬೈ ಮೂಲದವರು. ಇವರು ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಮಲ್ಲಿಕಾ ಸಾಗರ್ ಕಲಾ ಸಂಗ್ರಾಹಕಿ ಮತ್ತು ಸಲಹೆಗಾರ್ತಿಯು ಆಗಿದ್ದಾರೆ. ಜಗತ್ತಿನಲ್ಲೇ ಶ್ರೇಷ್ಟ ಹರಾಜುಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಇವರು ಸತತ ಎರಡನೇ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆ ಮುನ್ನಡೆಸುತ್ತಿದ್ದಾರೆ
2001ರಲ್ಲಿ ಅಂತಾರಾಷ್ಟ್ರೀಯ ಹರಾಜು ಸಂಸ್ಥೆಗಳಲ್ಲಿ ಒಂದಾದ ಕ್ರಿಸ್ಟಿಸ್ ನಲ್ಲಿ ಮಲ್ಲಿಕಾ ಸಾಗರ್ ತಮ್ಮ ವೃತ್ತಿಜೀವವನ್ನು ಪ್ರಾರಂಭಿಸಿದರು. ಭಾರತೀಯ ಮೂಲದ ಮೊದಲ ಹರಾಜುಗಾರ್ತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ ಲವ್ ಸ್ಟೋರಿ ಗೊತ್ತಾ ??
ಹಲವಾರು ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಸಿದ ಅನುಭವವನ್ನು ಹೊಂದಿದ್ದಾರೆ. 2021ರ ಪ್ರೊ ಕಬ್ಬಡಿ ಲೀಗ್ ಆಟಗಾರರ ಹರಾಜಿಗೆ ಮಲ್ಲಿಕಾ ಸಾಗರ್ ಹರಾಜು ವ್ಯವಸ್ಥಾಪಕರಾಗಿದ್ದರು.
ರಿಚರ್ಡ್ ಮ್ಯಾಡ್ಲಿ ಮತ್ತು ಎಡ್ಮೀಡ್ಸ್ ಐಪಿಎಲ್ ಹರಾಜುಗಳಲ್ಲಿ ಹೆಸರುಗಳಿಸಿದ್ದಾರೆ. 2023ರ ಟಿ-20 ಲೀಗ್ ಹರಾಜನ್ನು ನಡೆಸಿಕೊಡುವ ಮೂಲಕ ಈ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಮೊದಲ ಭಾರತೀಯ ಹರಾಜುಗಾರ್ತಿ ಎಂಬ ಇತಿಹಾಸವನ್ನು ಮಲ್ಲಿಕಾ ಸಾಗರ್ ನಿರ್ಮಿಸಿದ್ದಾರೆ.