ಕಡಲ್ಕೊರೆತಕ್ಕೆ ವಿಪರೀತ ಹಾನಿಗೊಳಗಾಗುತ್ತಿದ್ದ ಉಚ್ಚಿಲ,ಬಟ್ಟಂಪಾಡಿ,ಸೀಗ್ರೌಂಡ್ ಪ್ರದೇಶಗಳಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್,ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಳ್ಳಾಲ: ಕಡಲ್ಕೊರೆತಕ್ಕೆ ವಿಪರೀತ ಹಾನಿಗೊಳಗಾಗುತ್ತಿದ್ದ ಉಚ್ಚಿಲ,ಬಟ್ಟಂಪಾಡಿ,ಸೀಗ್ರೌಂಡ್ ಪ್ರದೇಶಗಳಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್,ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಅವರು ಜಿಲ್ಲಾಧಿಕಾರಿ ರವಿ ಕುಮಾರ್ ಎಮ್.ಆರ್ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ಉಳ್ಳಾಲದ ಕೋಡಿ,ಕೋಟೆಪುರ,ಮೊಗವೀರಪಟ್ಣ,ಸುಭಾಷ್ ನಗರ, ಹಿಲೇರಿಯ ಮೊದಲಾದ ಭಾಗದಲ್ಲಿ ಶಾಶ್ವತವಾದ ಕೆಲಸ ಮಾಡಿದ ಕಾರಣ ಇವತ್ತು ಅಲ್ಲಿ ಕಡಲ್ಕೊರೆತ ರಕ್ಷಣಾ ಕಾರ್ಯ ನಡೆದಿದೆ.
ಆ ನಿಟ್ಟಿನಲ್ಲಿ ವಿಪರೀತ ಕಡಲ್ಕೊರೆತಕ್ಕೊಳಗಾಗುತ್ತಿರುವ ಸೋಮೇಶ್ವರ ಉಚ್ಚಿಲ-ಬಟ್ಟಂಪಾಡಿ ಪ್ರದೇಶದಲ್ಲೂ ಶಾಶ್ವತ ರಕ್ಷಣಾ ಕಾರ್ಯ ಆಗಲೇಬೇಕಿದೆ.
ಮೊದಲ ಹಂತದ ಕಾಮಗಾರಿ ನಡೆದಿದ್ದರೂ ರಸ್ತೆ ಕಡಲು ಪಾಲಾಗಿದೆ. ಸಮಸ್ಯೆ ಉಲ್ಬಣಗೊಂಡ ಬಳಿಕ ಕಾಮಗಾರಿ ನಡೆಸುವುದಕ್ಕಿಂತ ಸಮಸ್ಯೆ ಉದ್ಭವಿಸುವ ಮುನ್ನವೇ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜತೆಗೆ ಸಮಾಲೋಚಿಸಿದ್ದು ಸ್ಥಳ ಪರಿಶೀಲನೆ ನಡೆಸಿದ್ದೇವೆ ಎಂದರು.
ಕಡಲ್ಕೊರೆತಕ್ಕೆ ಸಂಬಂಧಪಟ್ಟಂತೆ ತುರ್ತು ಕಾಮಗಾರಿ ಮತ್ತು ಶಾಶ್ವತ ಕಾಮಗಾರಿ ಆಗಬೇಕಿದೆ.
ಈಗಾಗಲೇ ಎನ್ ಐಟಿಕೆಯ ತಜ್ಞರು ಒಂದು ವರದಿ ಕೊಟ್ಟಿದ್ದಾರೆ. ಇಲ್ಲಿ ಶಾಶ್ವತ ಕಾಮಗಾರಿ ಆಗಬೇಕಾದ ಕಾರಣ ಅದಕ್ಕೆ ಸಂಬಂಧಪಟ್ಟ ತಜ್ಞ ಎಂಜಿನಿಯರ್ ಗಳನ್ನು ಕರೆಸಿ ಅವರು ಕೊಟ್ಟ ವರದಿಯನ್ನು ಸಂಬಂಧಪಟ್ಟ ಇಲಾಖೆ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದರು.
ಸೋಮೇಶ್ವರ ಉಚ್ಚಿಲ, ಬಟ್ಟಂಪಾಡಿ, ಮುಕ್ಕಚ್ಚೇರಿ ಬಳಿಯ ಸೀಗ್ರೌಂಡ್ ನಲ್ಲಿ ಈ ಬಾರಿ ಮಳೆಗೆ ಕಡಲ್ಕೊರೆತಕ್ಕೆ ಮನೆ, ಆಸ್ತಿ, ಪ್ರಾಣಹಾನಿ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ತಾತ್ಕಾಲಿಕ ಕಾಮಗಾರಿಗೂ ಆಗ್ರಹಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಮ್.ಆರ್ ರವಿಕುಮಾರ್,ವಿವಿಧ ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳು ಜತೆಗಿದ್ದರು.