ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಮಾಡಿಕೊಡುತ್ತೇನೆ ಎಂದು ನಂಬಿಸಿ 22.05 ಲಕ್ಷ ನಗದು ಹಣವನ್ನು ಪಡೆದು ಸೀಟ್ ಕೊಡಿಸದೇ ಮೋಸ ಮಾಡಿದ ಪ್ರಕರಣ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳೂರು: ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಮಾಡಿಕೊಡುತ್ತೇನೆ ಎಂದು ನಂಬಿಸಿ 22.05 ಲಕ್ಷ ನಗದು ಹಣವನ್ನು ಪಡೆದು ಸೀಟ್ ಕೊಡಿಸದೇ ಮೋಸ ಮಾಡಿದ ಪ್ರಕರಣ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ವಿವರ
ಬೀದರ್ ಮೂಲದ ಉತ್ತಮ್ ದೀಕ್ಷಿತ್ ಎಂಬುವವರು ಮೆಡಿಕಲ್ ಸೀಟ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಕರೆ ಮಾಡಿದ ಮಹಿಳೆಯೊಬ್ಬರು ದೇರಳಕಟ್ಟೆಯ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಕೌನ್ಸಿಲಿಂಗ್ ಮ್ಯಾನೆಜ್ಮೆಂಟ್ ಕೋಟಾದಲ್ಲಿ ಮೆಡಿಕಲ್ ಸೀಟ್ ಮಾಡಿಕೊಡುವುದಾಗಿ ಹೇಳಿದ್ದಾರೆ.
ಆಗ ಉತ್ತಮ್ ದೀಕ್ಷಿತ್ ನನಗೆ 50 ಲಕ್ಷ ರೂ ಒಳಗಾದರೆ ಮೆಡಿಕಲ್ ಸೀಟ್ ಬೇಕಾಗಿರುತ್ತದೆ ಎಂದು ಕಾಲ್ ಕಟ್ ಮಾಡಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ 9355273847 ಮೊಬೈಲ್ ನಂಬರ್‌ನಿಂದ ನೇಹ ಎಂಬ ಮಹಿಳೆ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ದೇರಳಕಟ್ಟೆ ಮಂಗಳೂರು ಎಂಬಲ್ಲಿ ಸೀಟ್ ಇದೆ, ಇದಕ್ಕೆ ರೂ.15 ಲಕ್ಷ ಕ್ಯಾಪಿಟೇಶನ್ ಫೀಸ್ ಮತ್ತು ರೂ.7.5 ಲಕ್ಷ ಹಣ ಫಸ್ಟ್ ಈಯರ್ ಫೀಸ್ ಕೊಡಬೇಕು, ಒಂದು ವರ್ಷದ ಹಾಸ್ಟೇಲ್ ಫೀಸ್ ಉಚಿತವಾಗಿ ಕೊಡುತ್ತೇವೆ.
ದಾಖಲಾತಿಗಳನ್ನು ವಾಟ್ಸ್ ಆ್ಯಪ್ ಮಾಡಿ ಎಂದಿದ್ದಾರೆ. ಅದರಂತೆ 2022ರ ಡಿ.17 ರಂದು ಉತ್ತಮ್ ದೀಕ್ಷಿತ್ ತನ್ನ ತಾಯಿ ಖಾತೆಯಿಂದ ರೂ.7,50,000/- ಮೌಲ್ಯದ ಡಿಮಾಂಡ್ ಡ್ರಾಫ್ಟ್ ನಂ. ನ್ನು ಪಡೆದು ಅದರ ಫೋಟೊವನ್ನು ವಾಟ್ಸ್ ಆ್ಯಪ್ ಮೂಲಕ ನೇಹರವರ ಮೊಬೈಲ್ ಕಳುಹಿಸಿದ್ದಾರೆ.
2022ರ ಡಿ.20 ರಂದು ಇದೇ ವಿಷಯಕ್ಕೆ ಸಂಬಂಧಿಸಿ 9205481751 ನೇ ನಂಬರ್‌ನಿಂದ ಪಾಯಲ್ (ಸೀನಿಯರ್ ಎಕ್ಸ್ಕ್ಯೂಟಿವ್) ಎಂಬುವವರು ಉತ್ತಮ್ ದೀಕ್ಷಿತ್‌ಗೆ ಕರೆ ಮಾಡಿ ಮೆಡಿಕಲ್ ಸೀಟ್ ಕನ್ಫರ್ಮ್ ಇದೆ. ನಾಳೆ ದೇರಳಕಟ್ಟೆ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ಬಳಿ ಬಂದು ಯಶ್ ಎಂಬ ವ್ಯಕ್ತಿಯನ್ನು ಭೇಟಿಯಾಗುವಂತೆ ತಿಳಿಸುತ್ತಾರೆ.
ಅದರಂತೆ ಮರುದಿನ ಬೆಳಿಗ್ಗೆ 11-15 ಗಂಟೆಗೆ ದೇರಳಕಟ್ಟೆಗೆ ಬಂದು ಯಶ್ ಎಂಬ ವ್ಯಕ್ತಿಯ 7304082371 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಿಕ್ಕಿದ್ದಾರೆ. ಕಾಲೇಜು ಸೀಟ್ ಬಗ್ಗೆ ಆಸ್ಪತ್ರೆಯ ಪಾರ್ಕಿಂಗ್ ಏರಿಯಾದ ಬಳಿ ಇರುವ ಮುಖ್ಯಸ್ಥರ ಚೇಂಬರ್ಗೆ ಹೋಗುವಾಗ ಅದೇ ಚೇಂಬರ್‌ನಿಂದ ಇಫ್ತಿಕಾರ್ ಅಹಮ್ಮದ್ ಎಂಬ ವ್ಯಕ್ತಿ ಹೊರಗೆ ಬಂದು ಮೆಡಿಕಲ್ ಸೀಟ್ ಕನ್ಫರ್ಮ್ ಆಗಿದೆ.
ಇದಕ್ಕೆ ಸಂಬಂಧಪಟ್ಟ ಫಾರ್ಮ್ ಭರ್ತಿಮಾಡಿಕೊಡಬೇಕು ಎಂದಿದ್ದಾರೆ. ಆಗ ಉತ್ತಮ್ ದೀಕ್ಷಿತ್‌ನನ್ನು ಸಮೀಪದ ಹೊಟೇಲ್‌ಗೆ ಕರೆದುಕೊಂಡು ಹೋಗಿ ಫಾರ್ಮ್ ಭರ್ತಿ ಮಾಡಿ, ರೂ.7,50,000/- ಮೌಲ್ಯದ ಡಿ.ಡಿ. ಲಗ್ತೀಕರಿಸಿ ಇಫ್ತಿಕಾರ್ ಅಹಮ್ಮದ್ ಅವರ ಕೈಯಲ್ಲಿದ್ದ ಮೆಡಿಕಲ್ ಸೀಟ್‌ನ ಅಡ್ಮಿಷನ್ ಲೆಟರ್ ಕೊಟ್ಟು, ಬಳಿಕ ಇಫ್ತಿಕಾರ್ ಅಹಮ್ಮದ್ ರವರು ಉತ್ತಮ್ ದೀಕ್ಷಿತ್ ತಂದೆಯ ಬಳಿಯಿಂದ ರೂ.15,00,000/- ನಗದು ಹಣ ಪಡೆದುಕೊಂಡಿದ್ದಾರೆ.
2022ರ ಡಿ.27 ರಂದು 7304082371 ನಿಂದ ಇಫ್ತಿಕಾರ್ ಅಹಮ್ಮದ್ ರವರು ಉತ್ತಮ್ ದೀಕ್ಷಿತ್‌ಗೆ ಕರೆ ಮಾಡಿ 2022-23 ನೇ ಸಾಲಿನ ಮೆಡಿಕಲ್ ಸೀಟ್ ಆಗಿದೆ. 2023 ಜ.6 ರಿಂದ ಕ್ಲಾಸ್ ಪ್ರಾರಂಭ ಆಗುತ್ತದೆ.
ಆದರೆ ಡಿಮಾಂಡ್ ಡ್ರಾಪ್ಟ್ ಕ್ಲೀಯರ್ ಇಲ್ಲದ ಕಾರಣ ಡಿ.ಡಿ ಯನ್ನು ಕ್ಯಾನ್ಸಲ್ ಮಾಡಿ ಮೊದಲನೇ ವರ್ಷದ ಟ್ಯೂಶನ್ ಫೀಸ್ ರೂ.7,50,000/- ಹಣವನ್ನು ನಗದು ರೂಪದಲ್ಲಿ ಕೊಡಬೇಕು. ಆ ಹಣವನ್ನು ಹೈದರಬಾದ್ ಏರ್ಪೋರ್ಟ್‌ಗೆ ಬಂದು ಅಲ್ಲಿ ಒಬ್ಬ ವ್ಯಕ್ತಿಯ ಕೈಯಲ್ಲಿ ಕೊಡಬೇಕು ಎಂದು ತಿಳಿಸಿದ್ದಾರೆ.
ಅದರಂತೆ 2022 ಡಿ.29ರಂದು ಅಶೋಕ್ ಸಿಂಗ್ ಎಂಬ ವ್ಯಕ್ತಿಗೆ ರೂ.7,50,000/- ನಗದು ಹಣವನ್ನು ಹಸ್ತಾಂತರಿಸಿರುತ್ತಾರೆ.
2023 ಜ.5 ರಂದು ಉತ್ತಮ್ ದೀಕ್ಷಿತ್ ದೇರಳಕಟ್ಟೆ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನ ಅಡ್ಮಿಷನ್ ವಿಭಾಗಕ್ಕೆ ಹೋಗಿ ಅಲ್ಲಿ ಅಡ್ಮಿಷನ್ ಆರ್ಡರ್ ತೋರಿಸಿದಾಗ ವಿದ್ಯಾಸಂಸ್ಥೆಯವರು ಅಂತಹ ಆದೇಶವನ್ನು ನೀಡಿಲ್ಲ ಎಂದಿದ್ದಾರೆ. ಸದ್ಯ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.