ನವದೆಹಲಿ: ನ್ಯಾಟೋ (NATO) ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಮೂಲ ಕಾರಣವೇ ಈ ನ್ಯಾಟೋ. 1991ರಲ್ಲಿ ಸೋವಿಯತ್ ಒಕ್ಕೂಟ ಪತನದ ಬಳಿಕ ಸೋವಿಯತ್ ಒಕ್ಕೂಟದಲ್ಲಿದ್ದ ಹಲವು ದೇಶಗಳು ನ್ಯಾಟೋ ಪಡೆಗಳ ಸದಸ್ಯ ರಾಷ್ಟ್ರಗಳಾಗಿವೆ.
ಅಲ್ಲದೆ 2008ರಲ್ಲಿ ರಷ್ಯಾದ ಜತೆ ಗಡಿ ಹಂಚಿಕೊಂಡ ಉಕ್ರೇನ್‌ಗೂ ಸದಸ್ಯ ರಾಷ್ಟ್ರವಾಗಲು ನ್ಯಾಟೋ ಆಹ್ವಾನ ನೀಡಿದೆ. ಆದರೆ ರಷ್ಯಾ ಇದಕ್ಕೆ ವಿರುದ್ಧವಾಗಿದೆ.
ಉಕ್ರೇನ್ ನ್ಯಾಟೋಗೆ ಸೇರಿದರೆ, ಉಕ್ರೇನ್ ನ್ಯಾಟೋದ ಗಡಿಯಲ್ಲಿರುತ್ತವೆ ಎಂಬುದೇ ರಷ್ಯಾಕ್ಕೆ ಇರುವ ಆತಂಕ. ಇದೇ ಕಾರಣಕ್ಕೆ ಉಕ್ರೇನ್ ನ್ಯಾಟೋ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಸೇರುವುದನ್ನು ವಿರೋಧಿಸಿಕೊಂಡೇ ಬರುತ್ತಿದೆ.
ಉಕ್ರೇನ್ ನ್ಯಾಟೋ ಪಟ್ಟಿಗೆ ಸೇರಿದರೆ, ಅಮೆರಿಕದ ಸೇನೆ ರಷ್ಯಾದ ಗಡಿಯಲ್ಲಿ ಬಂದು ನಿಯೋಜನೆಯಾಗಲಿದೆ ಎಂಬುದು ರಷ್ಯಾದ ಆತಂಕ.
ನ್ಯಾಟೋ ಒಕ್ಕೂಟ ಎಂದರೇನು
ಅಮೆರಿಕ, ಕೆನಡಾ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ 12 ರಾಷ್ಟ್ರಗಳು ರಚಿಸಿಕೊಂಡಿರುವ ಸೇನಾ ಮೈತ್ರಿಯೇ ನಾಥ್‌ರ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್(ನ್ಯಾಟೋ). ಪ್ರಸ್ತುತ 30 ದೇಶಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ.
ಈ ದೇಶಗಳ ಮೇಲೆ ಯಾವುದೇ ಶತ್ರು ದೇಶ ದಾಳಿ ಮಾಡಿದಂಥ ಸಂದರ್ಭದಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳು ಪರಸ್ಪರ ನೆರವಿಗೆ ಧಾವಿಸಲಿವೆ ಎಂಬುವುದು ಇದರ ಒಪ್ಪಂದ.
ರಷ್ಯಾದ ಪ್ರಮುಖ ಬೇಡಿಕೆಗಳು ಏನೇನು?
ಯಾವುದೇ ಕಾರಣಕ್ಕೂ ಉಕ್ರೇನ್ ಮತ್ತು ಸೋವಿಯತ್ ಒಕ್ಕೂಟದ ಭಾಗವಾಗಿದ್ದ ದೇಶಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ನ್ಯಾಟೋ ಮೈತ್ರಿಕೂಟ ಭರವಸೆ ನೀಡಬೇಕು.
ಪೂರ್ವ ಮತ್ತು ಕೇಂದ್ರ ಯುರೋಪ್ ದೇಶಗಳನ್ನು ವ್ಯಾಪ್ತಿಗೆ ಸೇರಿಸಿಕೊಳ್ಳುವುದಕ್ಕೆ ಮುನ್ನ ಅಂದರೆ 1997ಕ್ಕೆ ಮುನ್ನ ಇದ್ದ ಸ್ಥಿತಿಗೆ ಸೇನಾ ನಿಯೋಜನೆಯನ್ನು ನ್ಯಾಟೋ ಕಡಿತ ಮಾಡಬೇಕು.
ಬಂಡುಕೋರರ ವಶದಲ್ಲಿರುವ ಪ್ರದೇಶಗಳಿಗೆ ಉಕ್ರೇನ್ ಸರ್ಕಾರ ಸ್ವಾಯತ್ತೆ ನೀಡಬೇಕು. ರಷ್ಯಾದ ಗಡಿಯಲ್ಲಿ ನ್ಯಾಟೋ ದೇಶಗಳ ಯಾವುದೇ ಸೇನಾ ಕವಾಯತು ನಡೆಯಬಾರದು.