ಉಡುಪಿ : ಇಲ್ಲಿನ ಮಲ್ಪೆ ಬೈಲಕೆರೆ ಮಹಿಳೆಯೊಬ್ಬರು ಹಠಾತ್ ಅನಾರೋಗ್ಯಗೊಂಡು ಡಿ.28ರಂದು ಮೃತಪಟ್ಟಿದ್ದರು. ಇದೀಗ ಈ ಸಾವು ಹೊಸ ತಿರುವು ಪಡೆದುಕೊಂಡಿದ್ದು,
ಸಾವಿನ ಬಗ್ಗೆ ಸಂಶಯವಿದ್ದು ತನಿಖೆ ನಡೆಸುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಲ್ಪೆ ಬೈಲಕೆರೆ ನಿವಾಸಿ ವನಿತಾ ರಾಡ್ರಿಗಸ್ ಡಿ. 28ರಂದು ಹಠಾತ್ ಅನಾರೋಗ್ಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 31 ರಂದು ಮೃತಪಟ್ಟಿದ್ದಾರೆ.
ವನಿತಾ ಕೋವಿಡ್ ಲಸಿಕೆ ಪಡೆದ ಹಿನ್ನೆಲೆಯಲ್ಲಿ ಮೃತರಾಗಿರುತ್ತಾರೆ ಎಂದು ಸುಳ್ಳು ಪ್ರಚಾರ ಮಾಡ ಹೊರಟ ಆಕೆಯ ಗಂಡ ಹಲವಾರು ಬಾರಿ ಹಲ್ಲೆ ನಡೆಸಿ ಕೆಲವು ದಿನಗಳ ಹಿಂದೆಯೂ ಇದರ ಬಗ್ಗೆ ಪೋಲಿಸ್ ಠಾಣೆಗೂ ಹೋಗಿರುತ್ತಾರೆ.
ಸದ್ರಿ ಸಾವಿನ ಬಗ್ಗೆ ಹಲವಾರು ಸಂಶಯಗಳಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಲು ಬೈಲಕೆರೆ ಮಹಿಳೆಯರು ಮಲ್ಪೆ ಠಾಣೆಗೆ ಮನವಿ ಮಾಡಿದ್ದರು.
ಬೈಲಕೆರೆ ನಿವಾಸಿಗಳು ಈ ಘಟನೆಯ ಬಗ್ಗೆ ತನಿಖೆ ನಡೆಸಲು ಬೈಲಕೆರೆ ಯುವಕ ಮಂಡಲ ಮುಖಾಂತರ ಮಾಜಿ ತಾ.ಪಂ ಸದಸ್ಯ ಶರತ್ ಕುಮಾರ್ ಬೈಲಕೆರೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು ಆಯೋಗವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ತನಿಖೆಗೆ ಆದೇಶಿಸಿದ್ದಾರೆ.
ಬೈಲಕೆರೆಯ ಮಹಿಳೆಯ ಪರವಾಗಿ ಮಹಿಳೆಯರಿಂದ ನಡೆಯುತ್ತಿರುವ ಹೋರಾಟಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ರೀಮತಿ ಶ್ಯಾಮಲಾ ಕುಂದರ್ ಬೆಂಬಲ ನೀಡಿದ್ದಾರೆ.
ಮಲ್ಪೆ ಠಾಣಾಧಿಕಾರಿ ಸಕ್ತಿವೇಲು ಅವರಿಗೆ ಮನವಿ ನೀಡುವ ಕಾರ್ಯಕ್ರಮದಲ್ಲಿ ಬೈಲಕೆರೆಯ ಮಹಿಳೆಯರೊಂದಿಗೆ ತೆಂಕನಿಡಿಯೂರು ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಅರುಣ್ ಜತ್ತನ್ನ ಹಾಗೂ ಸದಸ್ಯರು, ತೆಂಕನಿಡಿಯೂರು ಸಂಜೀವಿನಿ ಸಂಘದ ಅಧ್ಯಕ್ಷ ಸುಕನ್ಯಾ ಶೆಟ್ಟಿ ಹಾಗೂ ಸಂಘದ ಸದಸ್ಯರು ಬೈಲಕೆರೆ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುನೀತ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಬೈಲಕೆರೆ ಸಮಸ್ತ ನಾಗರೀಕರು ಮಹಿಳೆಯರ ಹೋರಾಟಕ್ಕೆ ಬೆಂಬಲ ನೀಡಿರುತ್ತಾರೆ.