ಮಣಿಪಾಲ: ಇತ್ತೀಚೆಗೆ ಮಣಿಪಾಲದ ಕೆ.ಎಫ್‌ಸಿ ಹೋಟೆಲ್ ಬಳಿ ರಾತ್ರಿ ವೇಳೆಯಲ್ಲಿ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಕಾರ್‌ನಲ್ಲಿ ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಮೊಬೈಲ್, ವಾಚ್ ನಗದು ಹಣವನ್ನು ಸುಲಿಗೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಘಟನೆ ಮಣಿಪಾಲದ ವಿದ್ಯಾರ್ಥಿ ಮತ್ತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.
ದಿನಾಂಕ 31.01.2021 ರಂದು ರಾತ್ರಿ ಸುಮಾರು 12:15 ಗಂಟೆ ಸಮಯದಲ್ಲಿ ಮಣಿಪಾಲದ ಕೆ.ಎಫ್.ಸಿ ಬಿಲ್ಡಿಂಗ್ ಬಳಿ ಕುಳಿತು ಮಾತನಾಡುತ್ತಿದ್ದ
ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಯನ್ನು ನೋಡಿದ ಮೂವರು ಆರೋಪಿಗಳು ದೂರದಲ್ಲಿ ಕಾರ್ ನಿಲ್ಲಿಸಿ ಸಿಗರೇಟ್ ಕೇಳುವ ನೆಪದಲ್ಲಿ ವಿದ್ಯಾರ್ಥಿನಿಯ ಬಳಿ ಬಂದು ಅವಳ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಅವರ ಬಳಿಯಿದ್ದ 2 ಮೊಬೈಲ್ ಗಳು 250 ರೂಪಾಯಿ ನಗದು ಹಣ ಹಾಗೂ ಇಯರ್ ಫೋನ್‌ಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಎಸ್‌ಪಿ ಎನ್.ವಿಷ್ಣುವರ್ಧನ, ಆರೋಪಿಗಳ ಪತ್ತೆಗೆ ಅಡಿಷನಲ್ ಎಸ್‌ಪಿ ಕುಮಾರಚಂದ್ರ ಮತ್ತು ಡಿವೈಎಸ್‌ಪಿ ಸುಧಾಕರ ನಾಯಕ್ ಮೇಲುಸ್ತುವಾರಿಯಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ನಾಯಕತ್ವದಲ್ಲಿ ತಂಡವನ್ನು ರಚನೆ ಮಾಡಿದ್ದರು.
ತನಿಖಾ ತಂಡದ ಸದಸ್ಯರಾದ ಪಿಎಸ್‌ಐ ರಾಜ್‌ಶೇಖರ ವಂದಲಿ, ಪ್ರೊ.ಪಿ.ಎಸ್‌ಐ ನಿರಂಜನ್ ಗೌಡ ಮತ್ತು ದೇವರಾಜ ಬಿರದಾರ, ಎಎಸ್‌ಐ ಶೈಲೇಶ್‌ಕುಮಾರ್ , ಹೆಚ್ ಸಿ ಮಹೇಶ್ , ಅಬ್ದುಲ್ ರಾಜಾಕ್, ಥಾಮ್ಸನ್, ಪ್ರಸನ್ನ , ವಿಶ್ವಜಿತ್ , ಪಿಸಿ ಮೊಹಮ್ಮದ್ ರಫೀಕ್, ಆದರ್ಶ ನಾಯ್ಕ ರವರು ಹಾಗೂ ಸಿಡಿಆರ್ ಘಟಕದ ದಿನೇಶ್ ರವರು ಮುಂಬೈ, ಥಾಣೆ, ಬೆಂಗಳೂರು, ಶಿವಮೊಗ್ಗಗಳಲ್ಲಿ ತಿರುಗಾಡಿ
ಆರೋಪಿಗಳಾದ ಶಿವಮೊಗ್ಗದ ಆಶಿಫ್ ಮತ್ತು ದಸ್ತಗೀರ್ ಬೇಗ್ ರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಹೋಂಡಾ ಸಿವಿಕ್ MH-04-CT-1339 ಕಾರ್, 2 Android Mobile Phone ಮತ್ತು ಚಾಕುವನ್ನು ವಶಪಡಿಸಿಕೊಂಡಿರುತ್ತಾರೆ.
ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ
ಮಂಗಳೂರು/ನಾಗಪುರ : ಅ*ಪಘಾ*ತದಲ್ಲಿ ಗಾ*ಯಗೊಂಡವರಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ ರೂ.25 ಸಾವಿರವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ನಾಗಪುರದಲ್ಲಿ ನಡೆದ ರಸ್ತೆ ಸುರಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ , “ಅ*ಪಘಾ*ತವಾದಾಗ ಮೊದಲ 1 ಗಂಟೆ ನಿರ್ಣಾಯಕವಾಗಿದ್ದು, ಆ ಅವಧಿಯಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವ ವ್ಯಕ್ತಿಗೆ ಈಗ ನೀಡುತ್ತಿರುವ ಸಾವಿರ ರೂ.ಬಹುಮಾನ ಸಾಲುತ್ತಿಲ್ಲ. ಹೀಗಾಗಿ ಅವರಿಗೆ 25 ಸಾವಿರ ರೂ. ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಕೇಂದ್ರ ಸರಕಾರವು, ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳವರೆಗೆ 1.5 ಲಕ್ಷರೂ. ವರೆಗಿನ ಆಸ್ಪತ್ರೆ ವೆಚ್ಚವನ್ನು ಸಹ ಭರಿಸಲಿದೆ. ಇದು ರಾಜ್ಯ ಹೆದ್ದಾರಿಗಳಲ್ಲಿ ಗಾಯಗೊಂಡರೂ ಅನ್ವಯಿಸುತ್ತದೆ” ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವವರಿಗೆ ಬಹುಮಾನ ನೀಡುವ ಯೋಜನೆಯ ಪ್ರಕಾರ, ಮಾರಣಾಂತಿಕ ಅಪಘಾತಕ್ಕೊಳಗಾದವರ ಜೀವವನ್ನು ತಕ್ಷಣದ ಸಹಾಯವನ್ನು ಒದಗಿಸುವ ಮೂಲಕ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಗೋಲ್ಡನ್ ಅವರ್ (ಅ*ಪಘಾ*ತದ ನಂತರದ ಮೊದಲ ಗಂಟೆ) ಒಳಗೆ ಆಸ್ಪತ್ರೆಗೆ ಸಾಗಿಸುವ ಮೂಲಕ ಉಳಿಸುವ ಜನರಿಗೆ ಬಹುಮಾನ ನೀಡಲಾಗುತ್ತದೆ.
ಮಂಗಳೂರು/ನವದೆಹಲಿ : ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹಾಗೂ ಅನುಭವಿ ಆರಂಭ ಆಟಗಾರ್ತಿ ಸ್ಮೃತಿ ಮಂದಾನಾ ಅವರು ಐರ್ಲೆಂಡ್ ವಿರುದ್ದ ಶತಕ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ವೇಗದ ಶತಕದ ಹೊಸ ದಾಖಲೆ ಬರೆದರು.
ಬುಧವಾರ ರಾಜ್ ಕೋಟ್ ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ದ ಈ ಸಾಧನೆ ಮಾಡಿದರು. ಈ ಹಿಂದೆ ಭಾರತದಲ್ಲಿ ವೇಗದ ಶತಕ ದಾಖಲಿಸಿದ ಕೀರ್ತಿ ಹರ್ಮನ್ ಪ್ರೀತ್ ಕೌರ್ ಅವರ ಹೆಸರಿನಲ್ಲಿತ್ತು. ಮಂದಾನ ಈ ದಾಖಲೆಯನ್ನು ಮುರಿದರು. ಏಕದಿನ ಪಂದ್ಯಗಳಲ್ಲಿ ಮಂದಾನ 10 ಶತಕಗಳನ್ನು ಸಿಡಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್ ಅವರ ದಕ್ಷಿಣ ಆಫ್ರಿಕಾ ವಿರುದ್ದ 87 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ದಾಖಲೆಯಾಗಿತ್ತು. ಮಂದಾನಾ 70 ಎಸೆತಗಳಲ್ಲಿ ಶತಕ ಸಿಡಿಸಿ ಕೌರ್ ದಾಖಲೆ ಮುರಿದರು.
ಮಹಿಳಾ ಏಕದಿನ ಪಂದ್ಯಗಳಲ್ಲಿ 15 ಶತಕಗಳನ್ನು ಸಿಡಿಸಿರುವ ಆಸ್ಟ್ರೇಲಿಯಾದ ಮೇಗ್ ಲ್ಯಾನಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಯೂಜಿಲ್ಯಾಂಡ್ ನ ಬೇಟ್ಸ್ 13 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಟ್ಯಾಮಿ ಹಾಗೂ ಭಾರತದ ಮಂದಾನಾ ತಲಾ 10 ಶತಕಗಳನ್ನು ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಉಡುಪಿ : ಯಕ್ಷಗಾನ ಎಂಬುವುದು ಕರ್ನಾಟಕದ ಪ್ರಸಿದ್ಧ ಆರಾಧನಾ ಕಲೆಗಳಲ್ಲಿ ಒಂದು. ಆದರೆ ಈಗ ಅದಕ್ಕೆ ಬ್ರೇಕ್ ಕಾಟ ಶುರುವಾಗಿದೆ. ‘ಮೈಕ್‌ಗೆ ಅನುಮತಿ ಪಡೆದಿಲ್ಲ’ ಎಂಬ ಕಾರಣಕ್ಕೆ ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿ ಶಿರ್ಲಾಲುವಿನಲ್ಲಿ ಘಟನೆ ನಡೆದಿದೆ. ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಆಯೋಜನೆಗೊಂಡಿದ್ದ ಪ್ರದರ್ಶನದಲ್ಲಿ ಪೊಲೀಸರು ಈ ರೂಲ್ಸ್ ಜಾರಿಗೆ ಮುಂದಾಗಿದ್ದಾರೆ.
ಅಜೆಕಾರು ಉಪನಿರೀಕ್ಷಕ ಶುಭಕರ್ ಅವರಿಂದ ರಾತ್ರಿ 10ರ ನಂತರ ಯಕ್ಷಗಾನ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ. ಅಲ್ಲದೆ, ಆಯೋಜಕರನ್ನು ಅರೆಸ್ಟ್ ಮಾಡಲು ಕೂಡ ಪೊಲೀಸರು ಮುಂದಾಗಿದ್ದಾರೆ. ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗಲೇ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ. ಈ ವೇಳೆ ಕಿಡಿಕಾರಿದ ಗ್ರಾಮಸ್ಥರು, ಇಡೀ ಗ್ರಾಮದ ಜನರನ್ನು ಅರೆಸ್ಟ್ ಮಾಡಿ ಎಂದು ಹೈಡ್ರಾಮಾ ನಡೆಸಿದ್ದಾರೆ. ಕಾರ್ಯಕ್ರಮ ನಿಲ್ಲಿಸದಿದ್ದರೆ ಯಕ್ಷಗಾನ ಮಂಡಳಿ ಅಧ್ಯಕ್ಷನನ್ನು ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಎಫ್ಐಆರ್ ತೋರಿಸುವಂತೆ ದೂರು ದಾಖಲಾದ ಬಗ್ಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಗ್ರಾಮಸ್ಥರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಪೊಲೀಸರು ಸ್ಥಳದಿಂದ ತೆರಳಿದ್ದಾರೆ. ಜನವರಿ 10 ರಂದು ಪರವಾನಿಗೆಗೆ ಪಿಡಿಒ ಬಳಿ ಆಯೋಜಕರು ತೆರಳಿದ್ದು ವೇಳೆ ಮೂರು ದಿನಗಳ ರಜೆಯ ಕಾರಣಕ್ಕೆ ಅನುಮತಿ ದೊರಕಿರಲಿಲ್ಲ. ಜನವರಿ 13ರಂದು ಅನುಮತಿಗಾಗಿ ಆಯೋಜಕರು ಅಜೆಕಾರು ಠಾಣೆಗೆ ಹೋಗಿದ್ದರು. ಪಂಚಾಯತ್ ಅನುಮತಿ ತರುವಂತೆ ಪೊಲೀಸರ ತಾಕಿತು ಮಾಡಿದ್ದಾರೆ. ಈ ಘಟನೆಗೆ ಸಂಬಧಪಟ್ಟಂತೆ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾಲಕ್ಷ್ಮಿ ಸೌಂಡ್ಸ್ ಮುಖ್ಯಸ್ಥ ಅಪ್ಪು ವಿರುದ್ಧವೂ ಕೇಸ್ ಹಾಕಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಕಟ್ಟುನಿಟ್ಟಿನ ಕ್ರಮಕ್ಕೆ ಜಾರಿಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ .ಅರುಣ್ ಮುಂದಾಗಿದ್ದಾರೆ. ಆದೇಶ ಪಾಲಿಸದಿದ್ದರೆ ಆಯಾ ಠಾಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಎಚ್ಚರಿಸಿದ್ದಾರೆ. ಇದರಿಂದಾಗಿ ಪೊಲೀಸರಿಗೆ ಯಕ್ಷಗಾನದ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.