ಉಡುಪಿ : ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಮಹಿಳೆಯೋರ್ವಳು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಪತಿ ಮತ್ತು ಮಗನೊಂದಿಗೆ ಸಾಂತ್ ಮಾರಿ ಹಬ್ಬಕ್ಕೆ ಹೋಗುತ್ತಿದ್ದ ಸರಿತಾ ರಸ್ತೆ ಅಪಘಾತಕ್ಕೆ ಒಳಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಆದ್ರೆ ಜೀವನ್ಮರಣ ಹೋರಾಟ ಮಾಡಿ ಕುಟುಂಬವನ್ನು ದುಃಖದ ಕಡಲಲ್ಲಿ ಮುಳುಗಿಸಿ ಬುಧವಾರ ಇಹ ಲೋಕ ತ್ಯಜಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಕುವೈಟ್‌ನಿಂದ ಆಗಮಿಸಿದ್ದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗನೊಂದಿಗೆ ಸರಿತಾ ಕೋಟದಲ್ಲಿರುವ ತನ್ನ ತಂದೆ ತಾಯಿ ಮನೆಗೆ ದ್ವಿಚಕ್ರ ವಾಹನದಲ್ಲಿ ಸೋಮವಾರ ತೆರಳುತ್ತಿದ್ದಾಗ ಬ್ರಹ್ಮಾವರದಲ್ಲಿ ರಸ್ತೆ ಅಪಘಾತವಾಗಿತ್ತು.
ಪತಿ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ತಲೆಗೆ ಗಂಭೀರ ಗಾಯಗೊಂಡಿದ್ದ ಸರಿತಾರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
2 ದಿನಗಳ ಜೀವನ್ಮರಣ ಹೋರಾಟದಲ್ಲಿದ್ದ ಸರಿತಾ ಇಂದು ನಿಧನರಾಗಿದ್ದಾರೆ.
ಹತ್ತು ವರ್ಷಗಳ ಹಿಂದೆ ಉದ್ಯಾವರದ ಅಂಕುದ್ರು ನಿವಾಸಿ ಅನಿಲ್ ಪಿಂಟೊರವರೊಂದಿಗೆ ವಿವಾಹವಾಗಿದ್ದ ಸರಿತಾ, ಸರಳ ಮತ್ತು ಶಾಂತ ಸ್ವಭಾವದವರಾಗಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಸಹೋದರ ಧರ್ಮಗುರು, ತಾಯಿ, ಪತಿ, ಪುತ್ರಿ, ಪುತ್ರ, ಇಬ್ಬರು ಸಹೋದರಿಯರು ಮತ್ತು ಅಪಾರ ಬಂಧು ಬಳಗವನ್ನು ಶೋಕ ಸಾಗರದಲ್ಲಿ ಮುಳುಗಿಸಿ ಅಗಲಿದ್ದಾರೆ.