ಉಡುಪಿ: ದ.ಕ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪಿಎಫ್ಐ ಹಾಗೂ ಎಸ್‌ಡಿಪಿಐ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಸಂಘಟನೆಗಳ ಕೆಲವು ಮುಖಂಡರನ್ನು ಬಂಧಿಸಿದನ್ನು ವಿರೋಧಿಸಿ ಪಿಎಫ್ಐ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 66 ರ ಕಾಪುವಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಎನ್ಐಎ ವಿರುದ್ಧ ಪಿಎಫ್‌ಐ ಕಾರ್ಯಕರ್ತರು ಧಿಕ್ಕಾರ ಕೂಗಿದರು.
ಯಾವುದೇ ರೀತಿಯಲ್ಲಿ ಪೊಲೀಸ್ ಅನುಮತಿ ಪಡೆಯದೆ ಹೆದ್ದಾರಿ ತಡೆ ನಡೆಸಿದ ಪಿಎಫ್ಐ ಜಿಲ್ಲಾಧ್ಯಕ್ಷ ಫಯಾಝ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಖಡಕ್ ವಾರ್ನಿಂಗ್ ನೀಡಿ ಮನೆಗೆ ಕಳುಹಿಸಿದ್ದಾರೆ.
ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ‘ಎನ್ಐಎ ದಾಳಿ ಸಂಘ ಪರಿವಾರ ಪ್ರೇರಿತ, ಪಿಎಫ್‌ಐ ನಾಯಕರನ್ನು ಬಿಡುಗಡೆ ಮಾಡದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡುತ್ತೇವೆ’ ಎಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾಪು ವೃತ್ತ ನಿರೀಕ್ಷ ಕೆ.ಸಿ ಪೂವಯ್ಯ,ಕಾಪು ಎಸೈ ಶ್ರೀ ಶೈಲ ಮುರಗೋಡ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಬಂದೊಬಸ್ತ್ ನಡೆಸಿದರು. ಸದ್ಯ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದ್ದಾರೆ.