ಮಗಳ ಜೊತೆ 74 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದ ಉಡುಪಿ ಡಿಸಿ ಜಗದೀಶ್..!
ಉಡುಪಿ : ಸ್ವಾತಂತ್ರ್ಯ ದಿನಾಚರಣೆ ಎಂದ ತಕ್ಷಣ ಎಲ್ಲರಿಗೂ ಅವರ ಬಾಲ್ಯದ ನೆನಪು ತೆರೆದುಕೊಳ್ಳುತ್ತೆ. ಮುಂಜಾನೆ ಎದ್ದು ಬಿಳಿ ಯೂನಿಫಾರಂ ತೊಟ್ಟದ್ದು, ಸೆಲ್ಯೂಟ್ ಹೊಡೆದು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದು, ದೊಡ್ಡ ದೊಡ್ಡ ಬಾವುಟಗಳು ಹಾರುವುದನ್ನು ನೋಡಿದ್ದು, ಲಡ್ಡು ತಿಂದದ್ದು …ಹೀಗೆ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತದೆ.
ಸ್ವಾತಂತ್ರ್ಯ ದಿನಾಚರಣೆಯ ಕ್ರೇಜ್ ಇವತ್ತಿಗೂ ಮಕ್ಕಳಲ್ಲಿ ಕಡಿಮೆಯಾಗಿಲ್ಲ. ಕೊರೋನಾ ಬಂದ ಕಾರಣಕ್ಕೆ ಅತ್ಯಂತ ಸರಳವಾಗಿ ಉಡುಪಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಆಚರಣೆ ಎಷ್ಟೇ ಸರಳವಾಗಿದ್ದರೂ ಮಕ್ಕಳ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಧ್ವಜಾರೋಹಣ ಮಾಡಿದರು. ಜಿಲ್ಲಾಧಿಕಾರಿಗಳಿಗೆ ಧ್ವಜಾರೋಹಣ ಮಾಡುವ ಅವಕಾಶ ಸಿಗುವುದೇ ಅಪರೂಪ.
ಜಿಲ್ಲಾಧಿಕಾರಿ ಜಗದೀಶ್ ಅವರು ಟಿಪ್ ಟಾಪ್ ಕೋಟು ಧರಿಸಿ ಬಂದಿದ್ರು. ಇತ್ತ ಜಿಲ್ಲಾಧಿಕಾರಿಗಳ ಮಗಳ ಪಾಲಿಗಂತೂ ಅಪ್ಪನೇ ಹೀರೋ, ಸೆಲೆಬ್ರಿಟಿಯಾಗಿ ಕಂಡಿದ್ರು…
ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಡಿಹೋಗಿ ವೇದಿಕೆ ಹತ್ತಿ ತಂದೆ ಜೊತೆ ಮಗಳು ಫೋಟೋ ತೆಗೆಸಿಕೊಳ್ಳಲು ಚಡಪಡಿಸುತ್ತಿದ್ದಳು.
ಹಾಗೂ ಹೀಗೂ ಕೊನೆಗೂ ಫೋಟೋ ತೆಗೆಸಿಕೊಂಡು ಖುಷಿಪಟ್ಟಳು. ಜಿಲ್ಲಾಧಿಕಾರಿಗಳ ತಮ್ಮನ ಮಗಳು ಕೂಡ ಜೊತೆಗಿದ್ದಳು.
ಅಜ್ಜರಕಾಡು ಮೈದಾನ ಪ್ರವೇಶಿಸುತ್ತಿದ್ದಂತೆಯೇ ಅಪ್ಪನ ಹಿಂಬಾಲಿಸಿಕೊಂಡು ಬಂದ ಪುತ್ರಿ, ತಂದೆ ಭಾಷಣ ಮಾಡುವಾಗ ಮುಂದಿನ ಕುರ್ಚಿಯಲ್ಲಿ ಕೂತು ತಂದೆಯ ಭಾಷಣವನ್ನು ಆಲಿಸಿದರು.
ಅಪ್ಪನ ಜೊತೆಗೆ 74ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿದರು.