ಮುಂಬೈ: 2022ನೇ ಸಾಲಿನ ಮಿಸ್ ಇಂಡಿಯಾ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಗಿದ್ದು, ಉಡುಪಿಯ ಮೂಲದ ಇನ್ನಂಜೆಯ ನಿವಾಸಿಯಾಗಿರುವ ಸಿನಿ ಶೆಟ್ಟಿಯವರು ಮಿಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮವು ನಿನ್ನೆ ಸಂಜೆ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದಿದ್ದು, ಮಿಸ್ ಇಂಡಿಯಾ 2020 ತೆಲಂಗಾಣದ ಮಾನಸಾ ವಾರಣಾಸಿಯವರು ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ 2022 ಕಿರೀಟವನ್ನು ತೊಡಿಸಿದರು.
ಉಡುಪಿ ಜಿಲ್ಲೆಯ ಇನ್ನಂಜೆ ಮೂಲದವರಾದ ಸಿನಿ ಶೆಟ್ಟಿಯವರು ಮುಂಬೈನಲ್ಲಿ ಜನಿಸಿದ್ದಾರೆ. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಸಿನಿ ಶೆಟ್ಟಿ ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ ಕೋರ್ಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಅವರು ಈಗ ಪ್ರತಿಷ್ಠಿತ 71 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ರಾಜಸ್ಥಾನದ ರೂಬಲ್ ಶೇಖಾವತ್ ಅವರು ಮಿಸ್ ಇಂಡಿಯಾ 2022 ರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು ಮಿಸ್ ಇಂಡಿಯಾ 2022 ರ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.