ಪುತ್ತೂರು: ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡ ಓರ್ವ ಸವಾರ ಸಾವನ್ನಪ್ಪಿದ್ದಾನೆ. ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುತ್ತೂರಿನ ಕುಂಬ್ರದಲ್ಲಿ ನಡೆದಿದೆ.
ಮೃತರನ್ನು ಟ್ಯಾಪಿಂಗ್ ಕಾರ್ಮಿಕ ಸೆಲ್ವಂ ಎಂದು ಗುರುತಿಸಲಾಗಿದೆ. ಕೊಲ್ಲಾಜೆ ಒಳರಸ್ತೆಯಿಂದ ಸೆಲ್ವಂ ಚಲಾಯಿಸಿಕೊಂಡು ಬರುತ್ತಿದ್ದ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನ ಮುಖ್ಯ ರಸ್ತೆಗೆ ಎಂಟ್ರಿ ಕೊಡುತ್ತಿದ್ದ ವೇಳೆ ಕೆಯ್ಯೂರು ಕಡೆಯಿಂದ ಕುಂಬ್ರ ಕಡೆಗೆ ಹೋಗುತ್ತಿದ್ದ ಕೆ.ಟಿ.ಎಂ ಬೈಕ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ದ್ವಿಚಕ್ರ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು ಬೈಕ್ ಸಮೀಪದ ಚರಂಡಿಗೆ ಉರುಳಿ ಬಿದ್ದಿದೆ.
ಜುಪಿಟರ್ ಸವಾರ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಸೆಲ್ವಂ ಗಂಭೀರ ಸ್ವರೂಪದ ಗಾಯಗಳೊಂದಿಗೆ ರಸ್ತೆ ಮಧ್ಯೆದಲ್ಲಿ ಬಿದ್ದಿದ್ದ ಎನ್ನಲಾಗಿದೆ. ಕೆಟಿಎಂ ಬೈಕ್ ಸವಾರನು ಗಂಭೀರ ಗಾಯಗೊಂಡಿದ್ದು, ಆತ ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಅನೇಕ ಆಟೋ ರಿಕ್ಷಾ ಚಾಲಕರು ನಿರಾಕರಿಸಿದ್ದು, ಕುಂಬ್ರದ ಅಬ್ಬಾಸ್ ಎಂಬವರು ತಮ್ಮ ಆಪೆ ರಿಕ್ಷಾದಲ್ಲಿ ಕರೆದುಕೊಂಡು ಹೋಗಲು ಮುಂದಾಗಿ ಇಬ್ಬರೂ ಗಾಯಾಳುಗಳನ್ನು ಆಪೆ ರಿಕ್ಷಾದ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.
ಆದರೇ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸೆಲ್ವಂ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.