ಮಂಗಳೂರು/ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದ್ರೆ ನಮ್ಮ ಇಸ್ರೋ ಈ ವರ್ಷ ಅನೇಕ ಸಾಧನೆಗಳನ್ನು ಮಾಡಿದೆ. ಮತ್ತೊಂದು ಸಂಶೋಧನೆ ಮೂಲಕ ಇಸ್ರೋ ಸಂಸ್ಥೆ ಈ ವರ್ಷವನ್ನು ಮುಗಿಸಲು ಸಜ್ಜಾಗಿದೆ.
ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್’ ಮತ್ತು ‘ಅನ್ ಡಾಕಿಂಗ್’ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ತನ್ನ ಮಹತ್ತರ ಯೋಜನೆಯ ಭಾಗವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಸೋಮವಾರ ರಾತ್ರಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಲು ಸಜ್ಜಾಗಿದೆ.
ಇದನ್ನೂ ಓದಿ: ನ್ಯೂ ಇಯರ್ ಆಫರ್; ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು
ಸ್ಪೇಸ್ ಡಾಕಿಂಗ್ ಎಕ್ಸ್ ಪರಿಮೆಂಟ್ (ಸ್ಪೇಡ್ ಎಕ್ಸ್) ಹೆಸರಿನ ಈ ಕಾರ್ಯಯೋಜನೆ ಯಶಸ್ವಿಯಾದರೆ ಭಾರತವು ಇಂತಹ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎನಿಸಿಕೊಳ್ಳಲಿದೆ.
ಅಮೆರಿಕಾ, ರಷ್ಯಾ ಮತ್ತು ಚೀನಾ ಮಾತ್ರ ಬಾಹ್ಯಾಕಾಶ ನೌಕೆಗಳ ‘ಡಾಕಿಂಗ್’, ತಂತ್ರಜ್ಞಾನವನ್ನು ಹೊಂದಿರುವ ದೇಶಗಳಾಗಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಮಹತ್ವಾಕಾಂಕ್ಷಿ ಸ್ಪೇಡೆಕ್ಸ್ ಯೋಜನೆಯ ಉಪಗ್ರವನ್ನು ಇವತ್ತು (ಡಿ.30) ಭಾರತೀಯ ಕಾಲಮಾನ ರಾತ್ರಿ 9:58ಕ್ಕೆ ಉಡಾವಣೆಗೊಳಿಸಲು ಸಿದ್ದತೆ ನಡೆಸಿದೆ.
‘ಸ್ಪೇಡೆಕ್ಸ್’ ಅಂದ್ರೆ ಏನು
ಸ್ಪೇಡೆಕ್ಸ್ ಅಂದ್ರೆ ಸ್ಪೇಸ್ ಡಾಕಿಂಗ್ ಎಕ್ಸ್ ಪರಿಮೆಂಟ್. ಈ ಸ್ಪೇಡೆಕ್ಸ್ ಯೋಜನೆಯು 2024ರಲ್ಲಿ ಇಸ್ರೋದ ಅಂತಿಮ ಯೋಜನೆಯಾಗಲಿದೆ. ಇದೊಂದು ಕಡಿಮೆ ವೆಚ್ಚದ ಯೋಜನೆಯಾಗಿದ್ದು, ಬಾಹ್ಯಾಕಾಶದಲ್ಲಿ ಡಾಕಿಂಗ್ ನಡೆಸುವ ತಂತ್ರಜ್ಞಾನವನ್ನು ಪ್ರದರ್ಶಿಸಲು ವಿನ್ಯಾಸಗೊಂಡಿದೆ.
ಡಾಕಿಂಗ್ ಪ್ರಕ್ರಿಯೆಯಲ್ಲಿ ಎರಡು ಬಾಹ್ಯಾಕಾಶ ನೌಕೆಗಳನ್ನು ಬಾಹ್ಯಾಕಾಶದಲ್ಲಿ ಒಂದಕ್ಕೊಂದು ಜೋಡಿಸಲಾಗುತ್ತದೆ. ಈ ಯೋಜನೆಯನ್ನು ಇಸ್ರೋದ ಪಿಎಸ್ ಎಲ್ ವಿ ರಾಕೇಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ ಎಂದು ಇಸ್ರೋದಿಂದ ಮಾಹಿತಿ ನೀಡಲಾಗಿದೆ.
‘ಸ್ಪೇಡ್ ಎಕ್ಸ್’ ಉದ್ದೇಶ
ಚಂದ್ರನ ಅಂಗಳದಿಂದ ಕಲ್ಲು ಮತ್ತು ಮಣ್ಣಿನ ಮಾದರಿಯನ್ನು ಭೂಮಿಗೆ ತರುವುದು, ಪ್ರಸ್ತಾವಿತ 2035ಕ್ಕೆ ‘ಭಾರತೀಯ ಬಾಹ್ಯಾಕಾಶ ನಿಲ್ದಾಣ’ ಸ್ಥಾಪಿಸುವುದು ಮತ್ತು ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸುವುದು ಸೇರಿದಂತೆ ಬಾಹ್ಯಾಕಾಶದಲ್ಲಿ ಭಾರತದ ಭವಿಷ್ಯದ ಪ್ರಯೋಗಗಳಿಗೆ ‘ಸ್ಪೇಡ್ ಎಕ್ಸ್’ ಮಿಷನ್ ಒಂದು ಮೆಟ್ಟಿಲು ಎಂದು ನಿರೀಕ್ಷಿಸಲಾಗಿದೆ.