ಚೆನ್ನೆ ಫಾರೂಕ್ ಕಲ್ಲಡ್ಕ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ..!
ಬಂಟ್ವಾಳ: ಫಾರೂಕ್ ಯಾನೆ ಚೆನ್ನೆ ಫಾರೂಕ್ ಕಲ್ಲಡ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎಸ್.ಐ ಅವಿನಾಶ್ ನೇತೃತ್ವದ ತಂಡ ಗುರುವಾರ ಸಂಜೆ ತೊಕ್ಕೊಟ್ಟು ಎಂಬಲ್ಲಿ ಬಂಧಿಸಿದ್ದಾರೆ.
ಮೂಲತಃ ನಂದಾವರ ನಿವಾಸಿ ಪ್ರಸ್ತುತ ತೊಕ್ಕೊಟ್ಟು ವಿನಲ್ಲಿ ವಾಸವಾಗಿರುವ ಹಫೀಸ್ ಯಾನೆ ಅಪ್ಪಿ ಹಾಗೂ ಅಕ್ಕರಂಗಡಿ ನಿವಾಸಿ ಇರ್ಶಾದ್ ಬಂಧಿತ ಆರೋಪಿಗಳು.
ಅ.22 ರಂದು ಮೆಲ್ಕಾರ್ ಸಮೀಪದ ಗುಡ್ಡೆ ಅಂಗಡಿ ಎಂಬಲ್ಲಿ ಕಲ್ಲಡ್ಕ ನಿವಾಸಿ ಫಾರೂಕ್ ಯಾನೆ ಚೆನ್ನಫಾರೂಕ್ ಎಂಬಾತ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಸ್ನೇಹಿತ ಖಲೀಲ್ ಮತ್ತು ತಂಡ ಡಿಕ್ಕಿ ಹೊಡೆಸಿ ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ನಡೆಸಿದ್ದರು..
ಸ್ನೇಹಿತರ ನಡುವೆ ಹಣದ ಮತ್ತು ವೈಯಕ್ತಿಕ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಕೊಲೆ ನಡೆದಿರುವುದಾಗಿ ತಿಳಿದು ಬಂದಿತ್ತು
ಖಲೀಲ್ ಮತ್ತು ಆತನ ಸ್ನೇಹಿತರಾದ ಹಫೀಸ್ ಯಾನೆ ಅಪ್ಪಿ ಹಾಗೂ ಇರ್ಶಾದ್ ಕೊಲೆ ನಡೆಸಿ ಪರಾರಿಯಾಗಿದ್ದನ್ನು ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದರು. ಕೊಲೆ ನಡೆಸಿದವರ ಬಗ್ಗೆ ಮಾಹಿತಿ ಪಡೆದ ಪೋಲೀಸರು ಆರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಿದ್ದರು.
ಕೊಲೆ ನಡೆಸಿ ಬಳಿಕ ಬೆಂಗಳೂರು ಕಡೆಗೆ ಪರಾರಿಯಾಗಲು ಯತ್ನಿಸುತ್ತಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ಲಭ್ಯವಾಗಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ನಗರ ಠಾಣಾ ಎಸ್.ಐ. ಅವಿನಾಶ್ ಹಾಗೂ ಗ್ರಾಮಾಂತರ ಠಾಣಾ ಎಸ್.ಐ ಪ್ರಸನ್ನ ಬಿಸಿರೋಡಿನಿಂದ ಗುಂಡ್ಯ ವರೆಗೆ ವಾಹನವನ್ನು ಬೆನ್ನಟ್ಟಿಕೊಂಡು ಹೋಗಿ ಗುಂಡ್ಯ ತಲುಪುತ್ತಿದ್ದಂತೆ ಖಲೀಲ್ ನ ವಾಹನಕ್ಕೆ ಅಡ್ಡಲಾಗಿ ಇರಿಸಿ ಬಂಧಿಸಲು ಮುಂದಾಗುತ್ತಾರೆ.
ಆದರೆ ಖಲೀಲ್ ಮತ್ತು ಆತನ ಸಹಚರರಾದ ಹಫೀಸ್ ಮತ್ತು ಇರ್ಶಾದ್ ಪೋಲೀಸರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ.
ಬಂಧನದ ಪೋಲೀಸ್ ಮತ್ತು ಆರೋಪಿಗಳ ನಡುವೆ ಗಲಾಟೆ ಯಲ್ಲಿ ಗ್ರಾಮಾಂತರ ಎಸ್.ಐ. ಪ್ರಸನ್ನ ಅವರು ಗಾಯಗೊಂಡಿದ್ದರು.
ಪೋಲೀಸರ ಮೇಲೆ ಹಲ್ಲೆಗೆ ಮುಂದಾಗಿ ಪರಾರಿಯಾಗಲು ಯತ್ನಿಸಿದಾಗ ನಗರ ಠಾಣಾ ಎಸ್.ಐ.ಅವಿನಾಶ್ ಆರೋಪಿ ಖಲೀಲ್ ಮೇಲೆ ಗುಂಡು ಹಾರಿಸಿ ಬಂಧಿಸಿದ್ದರು.ಆದರೆ ಉಳಿದ ಇಬ್ಬರು ಆರೋಪಿಗಳು ಗುಂಡ್ಯ ದ ಗುಡ್ಡೆಯಲ್ಲಿ ಪರಾರಿಯಾಗಿದ್ದರು.
ಉಪ್ಪಿನಂಗಡಿ ಎಸ್.ಐ. ಈರಯ್ಯ ನೇತೃತ್ವದ ತಂಡ ಗುಡ್ಡೆ ಯಲ್ಲಿ ಆರೋಪಿಗಳ ಹುಡುಕಾಟ ನಡೆಸಿದ್ದರು ಆದರೆ ಅವರು ಅಲ್ಲಿಂದ ಪರಾರಿಯಾಗಿದ್ದರು.ಗಾಯಗೊಂಡ ಖಲೀಲ್ ಹಾಗೂ ಘಟನೆಯಲ್ಲಿ ಗಾಯಗೊಂಡ ಎಸ್.ಐ. ಪ್ರಸನ್ನ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗುಂಡೇಟಿನಿಂದ ಗಾಯಗೊಂಡ ಆರೋಪಿ ಖಲೀಲ್ ಇನ್ನೂ ಕೂಡ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದೇ ಸಂದರ್ಭದಲ್ಲಿ ಪರಾರಿಯಾಗಿದ್ದ ಹಫೀಸ್ ಯಾನೆ ಅಪ್ಪಿ ಹಾಗೂ ಇರ್ಶಾದ್ ಇಬ್ಬರು ಆರೋಪಿಗಳನ್ನು ಗುರುವಾರ ಸಂಜೆ ತೊಕ್ಕೊಟ್ಟುವಿನಲ್ಲಿ ಬಂಧಿಸಿದ್ದಾರೆ..