ಬೆಂಗಳೂರು: ಓವರ್ ಟೇಕ್ ಮಾಡುವ ವೇಳೆ ಎರಡು ಲಾರಿಗಳ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಲಾರಿಗಳ ನಡುವೆ ಡಿಕ್ಕಿ ಆದ ಪರಿಣಾಮ ಬೆಂಕಿ ಹೊತ್ತಿಕೊಂಡು ಓರ್ವ ಚಾಲಕ ಜೀವಂತವಾಗಿ ದಹನವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಇಂದು ನಸುಕಿನ ವೇಳೆ ನಡೆದಿದೆ.
ಇಲ್ಲಿನ ಭುಕ್ತಿ ಡಾಬಾ ಬಳಿ ಸಂಭವಿಸಿದ ಅಪಘಾತದಲ್ಲಿ ಎರಡೂ ಸಿಮೆಂಟ್ ಸಾಗಣೆ ಲಾರಿಗಳು ಹೊತ್ತಿ ಉರಿದವು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು.
ಓರ್ವ ಚಾಲಕನನ್ನು ಸ್ಥಳೀಯರು ರಕ್ಷಿಸಿದರು. ಆದರೆ ಮತ್ತೋರ್ವ ಚಾಲಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟ. ಅಪಘಾತ ಮತ್ತು ಬೆಂಕಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸುಮಾರು 3 ಕಿಮೀಯಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು.
ಸಂಚಾರ ನಿಯಂತ್ರಿಸಲು ಟ್ರಾಫಿಕ್ ಪೊಲೀಸರ ಹರಸಾಹಸಪಟ್ಟರು.
ಎರಡೂ ಲಾರಿಗಳು ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದವು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪ ಒಂದು ಲಾರಿಯನ್ನು ಮತ್ತೊಂದು ಲಾರಿ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಲಾರಿಯೊಂದು ಹೊತ್ತಿ ಉರಿದಿದೆ. ಚಾಲಕನ ಸೀಟ್ನಲ್ಲೇ ಮೃತದೇಹ ಸಿಲುಕಿದ್ದು, ಅಪಘಾತದ ರಭಸಕ್ಕೆ ಎರಡೂ ಲಾರಿಗಳು ನಜ್ಜುಗುಜ್ಜಾಗಿವೆ. ಎರಡೂ ಲಾರಿಗಳ ಚಾಲಕರು ಸ್ಪರ್ಧೆಗೆ ಬಿದ್ದವರಂತೆ ಲಾರಿ ಓಡಿಸುತ್ತಿದ್ದರು.
ಪರಸ್ಪರ ಡಿಕ್ಕಿ ಹೊಡೆದುಕೊಂಡ ಲಾರಿಗಳು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಬಿದ್ದಿದ್ದವು. ಲಾರಿ ಪಲ್ಟಿಯಾಗುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿತು. ಹೊರಗೆ ಬರಲು ಆಗದೆ ಚಾಲಕ ಪರದಾಡಬೇಕಾಯಿತು.
ಸ್ಥಳಿಯರು ಒಬ್ಬ ಚಾಲಕನನ್ನು ರಕ್ಷಿಸಿದರು. ಲಾರಿ ಜಖಂ ಆದ ಹಿನ್ನೆಲೆಯಲ್ಲಿ ಚಾಲಕ ಹೊರಗೆ ಬರಲು ಆಗದೆ ಅದರಲ್ಲಿಯೇ ಸಿಲುಕಿ ಸಾವನ್ನಪ್ಪಿದ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ..