ಸುವರ್ಣ ಸಂಭ್ರಮದಲ್ಲಿರುವ ತುಳು ಚಿತ್ರರಂಗದ ಪಿಂಗಾರ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗರಿ..!
ಮಂಗಳೂರು:ಚೆನ್ನೈನಲ್ಲಿ ನಡೆಯಲಿರುವ 2021ನೇ ಸಾಲಿನ ಇಂಡಿಯನ್ ಪನೋರಮಾ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟ ಕಥಾನಕವುಳ್ಳ ತುಳು ಮತ್ತು ಕನ್ನಡದಲ್ಲಿ ನಿರ್ಮಾಣವಾಗಿರುವ ಆರ್.ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ಆಯ್ಕೆಯಾಗಿದೆ.
ಅವಿನಾಶ್ ಶೆಟ್ಟಿ ಅವರ ಓಂ ಪ್ರೊಡಕ್ಷನ್ ಹೌಸ್ ನಿರ್ಮಾಣದ, ಪ್ರೀತಂ ಶೆಟ್ಟಿ ನಿರ್ದೇಶನದ ಚಿತ್ರ ಇದಾಗಿದ್ದು ಉತ್ತಮ ತುಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹಿಂದೆ ಚಿತ್ರಕ್ಕೆ ಬೆಸ್ಟ್ ಏಷ್ಯನ್ ಫಿಲ್ಮ್ ಅವಾರ್ಡ್ ಹಾಗೂ ಇಂಡಿಯನ್ ಪನೋರಮ ಎಂಬ ಪ್ರಶಸ್ತಿ ಸಿಕ್ಕಿತ್ತು. ಇದೀಗ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಚಿತ್ರತಂಡದಲ್ಲಿ ಹೆಮ್ಮೆ ಮೂಡಿಸಿದೆ.
ಇನ್ನು ಪಿಂಗಾರ ಚಲನಚಿತ್ರ ಕರ್ನಾಟಕ ಕರಾವಳಿಯ ತುಳು ನಾಡಿನ ದೈವಾರಾಧನೆ, ನಂಬಿಕೆ, ಆಚರಣೆ ಹಾಗೂ ಅದರ ಸುತ್ತ ಹೆಣೆದುಕೊಂಡಿರುವ ಜನರ ಸಂಸ್ಕೃತಿ ನಂಬಿಕೆಗಳ ಬದುಕಿನ ಕಥೆಯನ್ನು ಒಳಗೊಂಡಿದೆ.
ತುಳು ನಾಡಿನಲ್ಲಿ ದೈವಗಳ ಆರಾಧನೆಯಲ್ಲಿ ಸತ್ಯ, ನ್ಯಾಯಕ್ಕೆ ಒತ್ತು ನೀಡುತ್ತಾ ಪ್ರಕೃತಿ ಮನುಷ್ಯ ಅಹಂನ್ನೂ ಮೀರಿ ಅದಕ್ಕೆ ಉತ್ತರ ನೀಡುವ ದೈವದ ಸಂದೇಶದ ಕಥೆಯನ್ನು ಈ ಚಲನಚಿತ್ರ ಒಳಗೊಂಡಿದೆ.
ಇನ್ನು ಚಿತ್ರದ ತಾರಾಗಣದಲ್ಲಿ ರಂಗಭೂಮಿಯ ಹಿನ್ನೆಲೆಯ ಕಲಾವಿದರುಗಳಾದ ನೀಮಾರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸಿಂಚನಾ ಚಂದ್ರ ಮೋಹನ್, ಸುನಿಲ್ ನೆಲ್ಲಿಗುಡ್ಡೆ ಹಾಗೂ ಪ್ರಶಾಂತ್ ಸಿ.ಕೆ. ಅಭಿನಯಿಸಿದ್ದಾರೆ. ಇದೀಗ ಸುವರ್ಣ ಸಂಭ್ರಮದಲ್ಲಿರುವ ತುಳು ಚಿತ್ರರಂಗಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ತುಳು ಚಿತ್ರ ಕಲಾವಿದರ ಸಂತೋಷ ಮೇರೆ ಮೀರಿದಂತಾಗಿದೆ.