ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಬೆಳ್ತಂಗಡಿಯ ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಡ್ತ್ಯಾರು ಎಂಬಲ್ಲಿ ಗುರುವಾರ ಮಧ್ಯಾಹ್ನ ಚಲಿಸುತ್ತಿದ್ದ ಲಾರಿಯ ಟ್ರಾಲಿ ತುಂಡಾಗಿದ್ದು ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಗ್ಲಾಸ್ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಅಂಬಡ್ತ್ಯಾರ್ ಸಮೀಪಿಸುತ್ತಿದಂತೆ ಲಾರಿಯ ಟ್ರಾಲಿ ಮುರಿದು ಚಾಲಕನ ನಿಯಂತ್ರಣ ತಪ್ಪಿತು.
ಒಂದೆಡೆ ವಿದ್ಯುತ್ ಕಂಬ ಹಾಗೂ ಸಮೀಪವೇ ಕ್ಯಾಂಟೀನ್ ಇದ್ದು, ನಿಯಂತ್ರಣ ತಪ್ಪಿದ ಲಾರಿ ಕ್ಯಾಂಟೀನ್ ಮುಂಭಾಗದವರೆಗೂ ಚಲಿಸಿ ಬಳಿಕ ನಿಲುಗಡೆಯಾಗಿದೆ.
ಲಾರಿಯು ಕ್ಯಾಂಟೀನ್ ಅಥವಾ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯುತ್ತಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಮಧ್ಯಾಹ್ನವಾದ ಕಾರಣ ಕ್ಯಾಂಟೀನ್ ನಲ್ಲಿ ಹತ್ತರಿಂದ ಹದಿನೈದು ಮಂದಿ ಗ್ರಾಹಕರು ಇದ್ದರು. ಲಾರಿಯ ಟ್ರಾಲಿ ಸಂಪೂರ್ಣ ಮುರಿದು ಧರಾಶಾಯಿಯಾಗದಂತೆ ಸ್ಥಳೀಯರು ಮರದ ಕಂಬಗಳನ್ನು ಆಧಾರವಾಗಿ ಇರಿಸಿ, ಘಟನೆಯಿಂದ ಕಂಗಾಲಾಗಿದ್ದ ಚಾಲಕನನ್ನು ಉಪಚರಿಸಿದರು.
‘ಹೊಸ ಲಾರಿ ಆಗಿದ್ದು ಇದು ಕೇವಲ ಐದನೇ ಟ್ರಿಪ್ ಆಗಿದೆ. ಯಾವುದೇ ರೀತಿಯ ಓವರ್ ಲೋಡ್ ಇಲ್ಲದಿದ್ದರೂ ಟ್ರಾಲಿ ಮುರಿದಿದೆ’ ಎಂದು ಚಾಲಕ ತಿಳಿಸಿದ್ದಾನೆ.
ಲಾರಿಯ ಟ್ರಾಲಿ ಮುರಿದಿರುವುದನ್ನು ವೀಕ್ಷಿಸಲು ಇತರ ವಾಹನ ಸವಾರರು ರಸ್ತೆಯುದಕ್ಕೂ ವಾಹನ ನಿಲ್ಲಿಸಿದ್ದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.