ನವದೆಹಲಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸಿಎಂ ಸ್ಥಾನಕ್ಕೆ ಇಂದು ಏಕಾಏಕಿ ರಾಜೀನಾಮೆ ನೀಡಿದ್ದಾರೆ.
ಬಿಪ್ಲಬ್ ದೇಬ್ ನಿನ್ನೆ ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಇಂದು ಬೆಳಗ್ಗೆ ನೇರವಾಗಿ ಅಗರ್ತಲಾಗೆ ಮರಳಿದ್ದ ಅವರು ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಉಳಿದಿರುವಾಗ ಬಿಪ್ಲಬ್ ದೇಬ್ ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂಬುದು ತಿಳಿದಿಲ್ಲ.
ತ್ರಿಪುರಾದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಇಂದು ಸಂಜೆ 5 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನಿರ್ಗಮಿಸುತ್ತಿರುವ ಸಿಎಂ ಬಿಪ್ಲಬ್ ದೇಬ್ ಅವರನ್ನು ಪಕ್ಷದ ಸಂಘಟನಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಸದ್ಯದಲ್ಲೇ ಹೊಸ ಸಿಎಂ ನೇಮಕವಾಗಲಿದೆ ಎಂದು ಮೂಲವೊಂದು ತಿಳಿಸಿದೆ.