ಬೆಳ್ತಂಗಡಿ: ಚಲಿಸುತ್ತಿದ್ದ ಬೈಕ್ ನ ಮೇಲೆ ಮರ ಬಿದ್ದು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿಮಧ್ಯೆ ಮೃತಪಟ್ಟ ಘಟನೆ ಚಾರ್ಮಾಡಿ ಘಾಟ್ ನಲ್ಲಿ ಇಂದು ನಡೆದಿದೆ.
ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ನವೀನ್(24) ಮೃತಪಟ್ಟ ಸವಾರ.
ರಾಮನಗರದಿಂದ ಧರ್ಮಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಳೆ ಬಂದ ಹಿನ್ನೆಲೆ ಬೃಹತ್ ಮರವೊಂದು ಬೈಕ್ ಮೇಲೆ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ನವೀನ್ ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನ್ನಿಧ್ಯವನ್ನ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮಂಗಳವಾರ ಲೋಕಾರ್ಪಣೆ ಮಾಡಿದರು.
ಪತ್ನಿ ಸಮೇತರಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಧನ್‌ಕರ್, ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಕಾಂಪ್ಲೆಕ್ಸ್ ಉದ್ಘಾಟಿಸಿ ಅಮೃತವರ್ಷಿಣಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾದರು.
ವೇದಿಕೆಯಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪತ್ನಿ ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪರಾಷ್ಟ್ರಪತಿ ಕ್ಷೇತ್ರ ಕೆಲಸ ಕಾರ್ಯಗಳನ್ನ ಪ್ರಶಂಸಿಸಿ, ಇನ್ನಷ್ಟು ಒಳ್ಳೆ ಕಾರ್ಯ ನಡೆಯಲಿ ಎಂದು ಹಾರೈಸಿದರು.
ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಮಂಜುನಾಥ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಿದ್ದಾರೆ. ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಾರೆ. ಭಕ್ತರು ನಿಲ್ಲುವುದಕ್ಕಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಲಾಗಿದೆ. ಇದು ಕೇವಲ ಕಟ್ಟಡ ಮಾತ್ರ ಅಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ ಎಲ್ಲ ಜನರಿಗೆ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು, ಸಮಾನತೆಯನ್ನು ತೋರಿಸುತ್ತದೆ. ಧಾರ್ಮಿಕ ಸಂಸ್ಥೆಗಳು ಈ ದೇಶದಲ್ಲಿ ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿವೆ. ಧಾರ್ಮಿಕ ಸಂಸ್ಥೆಗಳೇ ಈ ದೇಶದ ಗ್ರಾಮೀಣ ಪ್ರದೇಶದ ಶಕ್ತಿ. ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನವಾಗಿದೆ ಎಂದು ತಿಳಿಸಿದರು.
ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು. ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು, ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕು. ಮೆಸಪೊಟೆಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ. ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ‍್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ‍್ಯ ಇದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆ ಇದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಸಂವಿಧಾನವೇ ನಮ್ಮಲ್ಲಿ ಪರಮೋಚ್ಛವಾದುದು. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದರು.
ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ, ದೇಶದ ಸೇವೆಗಾಗಿ ಜನತೆ ಮುಂದೆ ಬರಬೇಕಿದೆ. ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ದಿನದ 24 ಗಂಟೆಯೂ ರಾಜಕಾರಣವೇ ಮುಖ್ಯವಾಗಿರಬೇಕೇ? ದೇಶ ಸೇವೆಗೆ ಸಮಯ ವಿನಿಯೋಗ ಮಾಡುತ್ತಿದ್ದಾರೆಯೇ? ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ, ಅತ್ಯುನ್ನತ ನಾಗರಿಕತೆ ನಮ್ಮದು. ದೇಶದಲ್ಲಿ ಸಮಗ್ರತೆ, ವೈವಿಧ್ಯತೆ, ಸೌಹಾರ್ದವನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ಸೌಹಾರ್ದ ವಾತಾವರಣ ಉಳಿಸಿಕೊಳ್ಳುವುದು ಮುಖ್ಯ. ದೇಶದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಹುಟ್ಟಬೇಕಾಗಿದೆ. ಸಾಮಾಜಿಕ ಸದ್ಭಾವ ಎಲ್ಲಿಂದ ಬರಬೇಕು, ಭಾರತ ಮಾತೆ ಒಂದೇ ಎಂದಾಗ ಈ ಭಾವನೆ ಬರುತ್ತದೆ. ನಾವು ದೇಶಕ್ಕಾಗಿ ಕೆಲಸ ಮಾಡಬೇಕಿದೆ, ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದು ಹೇಳಿದರು.
ಧರ್ಮಸ್ಥಳ: ವಿವಿಧ ಪ್ರದೇಶದಿಂದ ಆಗಮಿಸುವ ಜನರು ಸಾಕಷ್ಟು ಹೊತ್ತು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಕಾಯು ತ್ತಾರೆ. ಭಕ್ತರಿಗೆ ಆಗುತ್ತಿರುವ ಈ ತೊಂದರೆಯನ್ನು ತಪ್ಪಿಸಲು ಸುಸಜ್ಜಿತವಾದ ಸರತಿ ಸಾಲಿನ ನೋಂದಣಿ ವ್ಯವಸ್ಥೆ ಮತ್ತು ಆರಾಮವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇರುವ ಸುಸಜ್ಜಿತ ಕಟ್ಟಡ ನಿರ್ಮಿಸಬೇಕೆನ್ನುವುದು ಹಲವು ವರ್ಷಗಳ ಹಿಂದಿನ ನಿರೀಕ್ಷಿತ ಯೋಜನೆ ಇದೀಗ ಪೂರ್ಣಗೊಂಡು ಉಪರಾಷ್ಟ್ರಪತಿ ಜಗದೀಪ್ ಧನಕರ್ ಉದ್ಘಾಟಿಸಲಿದ್ದಾರೆ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾಧಿಗಳು ಈ ವ್ಯವಸ್ಥೆಯನ್ನು ಉಪಯೋಗಿಸುವಂತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಭಾರತದ ಉಪರಾಷ್ಟ್ರ ಪತಿ ಜಗದೀಪ್ ಧನ್ಕರ್ ಅವರು ಮಂಗಳವಾರ ಶ್ರೀ ಕ್ಷೇತ್ರದ ನೂತನ ಸೌಲಭ್ಯಗಳನ್ನು ಒಳ ಗೊಂಡ ಸರತಿ ಸಾಲಿನ ಕಟ್ಟಡ ಸಂಕೀರ್ಣ ಶ್ರೀ ಸಾನ್ನಿಧ್ಯ ಇದರ ಉದ್ಘಾಟನೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ 2024- 25ರ ಜ್ಞಾನದೀಪ ಕಾರ್ಯಕ್ರಮದ ಉದ್ಘಾಟನೆಯ ತಯಾರಿಯ ಸಂದರ್ಭ ಸೋಮವಾರ ಸುದ್ದಿಗಾರ ರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ರೀತಿಯ ಸುಸಜ್ಜಿತ ಸಂಕೀರ್ಣ ನಿರ್ಮಿ ಸಲು ಕಳೆದ 15 ವರ್ಷದಿಂದ ಯೋಜಿಸಿ 11 ವಿವಿಧ ಯೋಜನೆ ರೂಪಿಸಿ ಅಂತಿಮವಾಗಿ ರೂಪಿಸಿದ ಸಾನಿಧ್ಯ ಸಂಕೀರ್ಣ ಸುಸಜ್ಜಿತ ವಾಗಿ ರೂಪಿಸಲಾಗಿದೆ.ಇದರಲ್ಲಿ ವ್ಯವಸ್ಥಿ ತವಾಗಿ ನೋಂದಣಿ, ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ, ಕುಳಿತು ಕೊಳ್ಳಲು ವ್ಯವಸ್ಥೆ, ಇದರಿಂದ ಭಕ್ರರು ಸಮಾಧಾನ ಚಿತ್ತ ರಾಗಿ ಕುಳಿತು ದೇವರ ದರ್ಶನ ಮಾಡಬಹುದಾಗಿದೆ. ಈ ವ್ಯವಸ್ಥೆ ಉಪಯೋಗ ಭಕ್ತಾದಿಗಳಿಗೆ ಲಭಿಸಲಿದೆ ಎಂದು ಹೆಗ್ಗಡೆ ವಿವರಿಸಿದರು.
ಮಂಗಳೂರು: ಹೊಸ ವರ್ಷಾರಂಭ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬಂದಿದೆ. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಭಕ್ತರು ದೇಗುಲಗಳಿಗೆ ಆಗಮಿಸಿ ದೇವರ ದರ್ಶನ ಪಡೆದು ಹೊಸ ವರ್ಷದ ದಿನಾರಂಭ ಮಾಡುತ್ತಿದ್ದಾರೆ.
ಕದ್ರಿ ಮಂಜುನಾಥ ದೇಗುಲಕ್ಕೆ ಬೆಳ್ಳಗ್ಗಿನಿಂದಲೂ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ದೇವಳದ ಕೆರೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ದೇವಳದ ಮುಂದೆ ಕಲಶ ಸ್ನಾನ ಮಾಡುತ್ತಿದ್ದಾರೆ. ಕದ್ರಿ ದೇವಳದಲ್ಲಿ ಕಲಶ ಸ್ನಾನ ಸೇವೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ.
ಹೊಸ ವರ್ಷಾರಂಭದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಭಕ್ತ ಸಾಗರವೇ ನೆರೆದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ದಂಡು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮುಗಿಬಿದ್ದಿದೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸದ್ಯ ದೇವಸ್ಥಾನದ ಕ್ಯೂ ಸೆಂಟರ್ನಲ್ಲಿ ಭಾರೀ ಜನಜಂಗುಳಿ ಏರ್ಪಟ್ಟಿದೆ.
ದೇವಸ್ಥಾನದ ಮುಂಭಾಗದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.