ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದರೆ ಎಸ್ಮಾ ಜಾರಿಯ ಎಚ್ಚರಿಕೆ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ..!
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಇಂದೂ ಕೂಡ ಮುಂದುವರಿದಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಹೊರಟಿದ್ದ ಮೂರು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಕಾಚರಕನಹಳ್ಳಿಯಲ್ಲಿ , ಹೆಣ್ಣೂರು ಬ್ರಿಡ್ಜ್ ಹಾಗೂ ಮೇಡಿ ಅಗ್ರಹಾರದಲ್ಲಿ ಬೆಳಗ್ಗೆ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಲಾಗಿದ್ದು, ಗಾಜುಗಳು ಪುಡಿಯಾಗಿವೆ.ನಿನ್ನೆ ಒಟ್ಟು 14 ಬಸ್‍ಗಳಿಗೆ ಕಲ್ಲು ಹೊಡೆದಿದ್ದು, ಗಾಜುಗಳು ಜಖಂಗೊಂಡಿವೆ. ನಗರದ ಎಲ್ಲಾ ಡಿಫೋಗಳಿಂದ ಇಂದು 91 ಬಸ್‍ಗಳು ಸಂಚಾರಕ್ಕೆ ಹೊರಟಿವೆ.
ನಿನ್ನೆ ವಿವಿಧ ಜಿಲ್ಲೆಗಳಲ್ಲಿ ಕಿಡಿಗೇಡಿಗಳು ಕೆಎಸ್‍ಆರ್‍ಟಿಸಿಯ 34 ಬಸ್‍ಗಳಿಗೆ ಕಲ್ಲು ತೂರಾಟ ಮಾಡಿ ಜಖಂಗೊಳಿಸಿದ್ದಾರೆ.
ಸಾರಿಗೆ ನೌಕರರು ತಮ್ಮ ಪ್ರತಿಭಟನೆಯನ್ನು ನಾಳೆ ಸಂಜೆಯೊಳಗೆ ಹಿಂಪಡೆಯದಿದ್ದರೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಪ್ರತಿಭಟನೆಯನ್ನು ಕೈಬಿಟ್ಟು ಎಲ್ಲಾ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಮಾತುಕತೆಗೆ ಬಂದು ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಮುಂದಾಗದಿದ್ದರೆ ಎಸ್ಮಾ ಜಾರಿಯಾಗುವುದು ಖಚಿತ.
ನಾಳೆ ಸಂಜೆಯವರೆಗೂ ಕಾದು ನೋಡಿ. ನೌಕರ ಸಂಘಟನೆಯ ಮುಖಂಡರು ಮಾತುಕತೆಗೆ ಬಾರದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರೆ ಅವರ ವಿರುದ್ಧ ಎಸ್ಮಾ ಜಾರಿ ಮಾಡಲು ಹಿಂದೆಮುಂದೆ ನೋಡಬಾರದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಕೊಟ್ಟಿದ್ದಾರೆ.