ಝೀರೊ ಟ್ರಾಫಿಕ್ ನೆಪದಲ್ಲಿ ಟ್ರಾಫಿಕ್ ರೂಲ್ಸ್ ದುರುಪಯೋಗ: ಬೇಕಾಬಿಟ್ಟಿ ವಾಹನ ಸಂಚಾರ: ಬಣಕಲ್ ಠಾಣೆಯಲ್ಲಿ ದೂರು ದಾಖಲು..!
ಚಿಕ್ಕಮಗಳೂರು: ಈಚೆಗೆ ಯುವತಿಯೊಬ್ಬರ ಶ್ವಾಸಕೋಶದ ಸಮಸ್ಯೆಗೆ ತುರ್ತು ಚಿಕಿತ್ಸೆ ನೀಡಬೇಕೆಂದು ಪುತ್ತೂರಿನಿಂದ ಬೆಂಗಳೂರಿಗೆ ಆಂಬುಲೆನ್ಸ್ ಮೂಲಕ ಝೀರೊ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದರೆ ಇದೀಗ ಝೀರೊ ಟ್ರಾಫಿಕ್ ಅನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಝೀರೊ ಟ್ರಾಪಿಕ್ ನೆಪದಲ್ಲಿ ಬೇಕಾಬಿಟ್ಟಿ ವಾಹನ ಓಡಿಸಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುವ ಬಗ್ಗೆ ಬಣಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಬಣಕಲ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರೋಗಿಗೆ ತಕ್ಷಣದ ಶಸ್ತ್ರಚಿಕಿತ್ಸೆ ಇದೆ ಎಂದು ಜನರನ್ನು ನಂಬಿಸಿ ಆಂಬುಲೆನ್ಸ್ ಸಂಚರಿಸಲು ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಸುಗಮವಾಗಿದ್ದರೂ ಪುತ್ತೂರು, ಚಾರ್ಮಾಡಿ, ಕೊಟ್ಟಿಗೆಹಾರ, ಮೂಡಿಗೆರೆ ಹ್ಯಾಂಡ್ ಪೋಸ್ಟ್, ಬೇಲೂರು ರಸ್ತೆ ಮೂಲಕ ಬೆಂಗಳೂರಿಗೆ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ಝೀರೊ ಟ್ರಾಫಿಕ್ ಮಾಡಲಾಗಿತ್ತು. ಆದರೆ ಆರು ದಿನ ಕಳೆದರೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ತುರ್ತು ಚಿಕಿತ್ಸೆ ಅಗತ್ಯ ಇಲ್ಲದೇ ಇದ್ದರೂ ಅನವಶ್ಯಕವಾಗಿ ಝೀರೊ ಟ್ರಾಫಿಕ್ ನಲ್ಲಿ ಕರೆದ್ಯೊಯಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ತಿಂಗಳ ಡಿ.2ರಂದು ಝೀರೊ ಟ್ರಾಫಿಕ್ ಮಾಡಿಸಿ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ರಸ್ತೆಯಲ್ಲಿ ವಾಹನಗಳನ್ನು ತಡೆದು ಆ ಮೂಲಕ ಆಂಬುಲೆನ್ಸ್ ಸಹಿತ ಇತರೆ ನಾಲ್ಕೈದು ಖಾಸಗಿ ವಾಹನಗಳನ್ನು ಅತ್ಯಂತ ವೇಗವಾಗಿ ಚಲಾಯಿಸಲಾಗಿದೆ.
ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾರುಣ್ಯ ನಿಧಿ ಕರ್ನಾಟಕ ಚಾರಿಟೆಬಲ್ ಟ್ರಸ್ಟ್ ಕಾರ್ಯನಿರ್ವಾಹಕ ಹರ್ಷದ್ ಕೊಪ್ಪ, ನಿಸಾರ್ ನಿಚ್ಚು ಮಂಗಳೂರು, ಜಲೀಲ್ ಮತ್ತು ಇತರರು ಕಾರಣ ಎಂದು ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲ, ಆಂಬುಲೆನ್ಸ್ ಬಗ್ಗೆ ಪರಿಶೀಲನೆ ನಡೆಸಿದಾಗ ಆಂಬುಲೆನ್ಸ್ ಗೆ ಇನ್ಸುರೆನ್ಸ್ ಇಲ್ಲದಿರುವುದು, ರೋಡ್ ಟ್ಯಾಕ್ಸ್ ಕಟ್ಟದೇ ಇರುವುದು ತಿಳಿದುಬಂದಿದೆ.
ಆದ್ದರಿಂದ ಆಂಬುಲೆನ್ಸ್ ಸಹಿತ ಅತಿ ವೇಗವಾಗಿ ಚಲಿಸಿದ ಇತರೆ ಎಲ್ಲಾ ವಾಹನಗಳನ್ನು ವಶಪಡಿಸಿಕೊಂಡು ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.