ಮಂಗಳೂರು: ನಾಳೆಯಿಂದ (ಎಪ್ರಿಲ್ 1) ಟೋಲ್ ಶುಲ್ಕ ಶೇಕಡಾ 10 ರಷ್ಟು ಏರಿಕೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ನಾಳೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಯಾಣ ದುಬಾರಿಯಾಗಲಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನವ ಯುಗ ಕಂಪೆನಿ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡದ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ, ಸಾಸ್ತಾನ- ಗುಂಡ್ಮಿ ಟೋಲ್ ಗೇಟ್‌ಗಳಲ್ಲಿ ಟೋಲ್ ದರ ಹೆಚ್ಚಳವಾಗಲಿದೆ.
ಪರಿಷ್ಕೃತ ದರದಂತೆ ಕಾರು, ಜೀಪು, ವ್ಯಾನ್ ಸಹಿತ ಲಘು ಮೋಟಾರು ವಾಹನಗಳ ಏಕ ಮುಖ ವಾಹನ ಸಂಚಾರಕ್ಕೆ ತಲಪಾಡಿ ಮತ್ತು ಹೆಜಮಾಡಿಯಲ್ಲಿ 50 ರೂ., ಸಾಸ್ತಾನದಲ್ಲಿ 60 ರೂ. ಪಾವತಿಸಬೇಕಾಗುತ್ತದೆ.
ಲಘು ವಾಣಿಜ್ಯ – ಸರಕು ವಾಹನ, ಮಿನಿ ಬಸ್ಸುಗಳ ಏಕ ಮುಖ ಸಂಚಾರಕ್ಕೆ ತಲಪಾಡಿ, ಹೆಜಮಾಡಿಯಲ್ಲಿ 80 ರೂಪಾಯಿ ಹಾಗೂ ಸಾಸ್ತಾನದಲ್ಲಿ 95 ರೂ. ನಿಗದಿಯಾಗಿದೆ. ಬಸ್ಸು ಮತ್ತು ಟ್ರಕ್ಕುಗಳ ಏಕ ಮುಖ ಸಂಚಾರಕ್ಕೆ ತಲಪಾಡಿ ಮತ್ತು ಹೆಜಮಾಡಿಗಳಲ್ಲಿ 165 ರೂ., ಸಾಸ್ತಾನದಲ್ಲಿ 195 ರೂ. ಪಾವತಿಸಬೇಕು.
ಭಾರಿ ನಿರ್ಮಾಣ ಯಂತ್ರಗಳು, ಭೂ ಅಗೆತದ ಸಾಧನಗಳು ಅಥವಾ ಮಲ್ಟಿ ಆ್ಯಕ್ಸೆಲ್ ವಾಹನಗಳು, 3 ರಿಂದ 6 ಆ್ಯಕ್ಸೆಲ್ ವಾಹನಗಳಿಗೆ ಏಕ ಮುಖ ಸಂಚಾರಕ್ಕೆ ತಲಪಾಡಿಯಲ್ಲಿ 250 ರೂ. ಹೆಜಮಾಡಿಯಲ್ಲಿ 260 ರೂ. ಸಾಸ್ತಾನದಲ್ಲಿ 310 ರೂ. ನಿಗದಿಯಾಗಿದೆ.
ಮಿತಿ ಮೀರಿದ ಅಳತೆಯ ವಾಹನಗಳು ಅಂದರೆ 7 ಅಥವಾ ಹೆಚ್ಚು ಆ್ಯಕ್ಸೆಲ್ ನ ವಾಹನಗಳು ಏಕಮುಖ ವಾಹನ ಸಂಚಾರಕ್ಕೆ ತಲಪಾಡಿ ಮತ್ತು ಹೆಜಮಾಡಿಯಲ್ಲಿ 320 ರೂ. ಸಾಸ್ತಾನದಲ್ಲಿ 375 ರೂ. ಪಾವತಿಸ ಬೇಕಾಗುತ್ತದೆ. 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ವಸೂಲಿ ಮತ್ತು ಸಂಗ್ರಹ ನಿಯಮಗಳ ಪ್ರಕಾರ, ಪ್ರತಿ ವರ್ಷವೂ ಎಪ್ರಿಲ್ 1 ರಿಂದ ಟೋಲ್ ದರವನ್ನು ಪರಿಷ್ಕರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.