Friday, May 27, 2022

ಇಂದು ಸಂಜೆ ಕಂಠೀರವ‌ ಸ್ಟುಡಿಯೋದಲ್ಲಿ ಪುನೀತ್‌ ಅಂತ್ಯಕ್ರಿಯೆ

ಬೆಂಗಳೂರು: ನಿನ್ನೆ ಹೃದಯಾಘಾತದಿಂದ ನಿಧನರಾದ ನಟ‌ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಕಂಠೀರವ‌ ಸ್ಟುಡಿಯೊ ಬಳಿ‌ ನೆರವೇರಲಿದೆ.


ಪುನೀತ್ ಅವರ ಪುತ್ರಿ ಧೃತಿ ನ್ಯೂಯಾರ್ಕ್ ನಿಂದ ಹೊರಟಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ದಿಲ್ಲಿ ತಲುಪಲಿದ್ದಾರೆ. ಅಲ್ಲಿಂದ ಸಂಜೆ 4:30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ಬಳಿಕ ಪುನೀತ್ ಅಂತ್ಯ ಸಂಸ್ಕಾರ ನೆರವೇರಲಿದೆ.
ಅಪರಾಹ್ನ ಮೂರು ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಪುನೀತ್ ಅಂತಿಮಯಾತ್ರೆ ಆರಂಭವಾಗಲಿದೆ. 5 ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನಡೆಯಲಿರುವ ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಡಾ.ರಾಜ್ ಸ್ಮಾರಕದ ಆವರಣಕ್ಕೆ ತಲುಪಲಿದೆ.

ಆ ಬಳಿಕ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ, ನಟ ವಿನಯ್ ರಾಜ್ ಕುಮಾರ್ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಪುನೀತ್ ಪಾರ್ಥಿವ ಶರೀರ ಇರಿಸಿರುವ ಕಂಠೀರವ ಕ್ರೀಡಾಂಗಣ ಹಾಗೂ‌ ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ‌ ಸ್ಟುಡಿಯೊ ಬಳಿ‌ ಪೊಲೀಸರು ಬಿಗಿ‌ ಭದ್ರತೆ ಕೈಗೊಂಡಿದ್ದಾರೆ.
ಪಾರ್ಥಿವ ಶರೀರದ ಅಂತಿಮ‌ ಯಾತ್ರೆ ವೇಳೆಯಲ್ಲೂ‌ ಯಾವುದೇ ಅಹಿತಕರ‌ ಘಟನೆಗಳು‌ ನಡೆಯದಂತೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics