ಮಂಗಳೂರು: ಇವತ್ತಲ್ಲ ನಾಳೆ ಸಾರ್ವಜನಿಕರಿಗೆ ತೊಂದರೆ ಕೊಡುವ ಆಝಾನ್ ನಿಲ್ಲುವ ಸ್ಥಿತಿಗೆ ಬರುತ್ತದೆ ಎಂದು ರಾಜ್ಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಪರೀಕ್ಷೆಗಳು ನಡೆಯುತ್ತಿವೆ ಆಗ ಬೆಳಗೆದ್ದು ಓದುತ್ತಿರುವ ಎಳೆಯ ಮಕ್ಕಳಿಗೆ ಈ ಆಝಾನ್ ಶಬ್ದದಿಂದ ಏಕಾಗ್ರತೆ ಭಂಗ ಉಂಟಾಗುತ್ತಿದೆ. ಜೊತೆಗೆ ರೋಗಿಗಳಿಗೂ ತೊಂದರೆಯಾಗುತ್ತಿದೆ.
ಈ ಬಗ್ಗೆ ಮುಸಲ್ಮಾನ ನಾಯಕರು ಚಿಂತನೆ ನಡೆಸಬೇಕು. ಇದು ಮತ್ತೊಬ್ಬರ ಮೇಲೆ ಹೇರುವುದಲ್ಲ ಎಂದ ಅವರು ನಾವು ಸಾರ್ವಜನಿಕರ ಬಳಿ ಹೋದಾಗ ಆಝಾನ್ ನಿಷೇಧಕ್ಕೆ ಕಾನೂನು ತರುವುದಿಲ್ವೇ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ ಎಂದರು.
ಮುಸಲ್ಮಾನರ ವೋಟು ಬೇಡ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ನಾವು ಎಲ್ಲಾ ಮುಸಲ್ಮಾನರ ವೋಟು ಬೇಡ ಎಂದಿಲ್ಲ. ಪಿಎಫ್‌ಐ ಹಾಗೂ ಎಸ್‌ಡಿಪಿಐ ಬೆಂಬಲಿತ ಮುಸ್ಲಿಂಮರ ಓಟು ಬೇಡ ಎಂದಿದ್ದೇವೆ. ರಾಷ್ಟ್ರೀಯ ಮುಸ್ಲಿಂಮರು ನಮಗೆ ಓಟು ಹಾಕುತ್ತಾರೆ ಎಂದರು.
ವಿಜಯಸಂಕಲ್ಪ ಯಾತ್ರೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು. ಲಂಚ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ವಿಜಯೋತ್ಸವ ಮಾಡಿದ್ದು ನೂರಕ್ಕೆ ನೂರು ತಪ್ಪು ಎಂದ ಅವರು ಇದಕ್ಕೆ ಈ ಹಿಂದೆ ಡಿಕೆಶಿ ಜೈಲಿನಿಂದ ಹೊರಬಂದಾಗ ಮಾಡಿದ ವಿಜೆಯೋತ್ಸವವೇ ಪ್ರೇರಣೆ ಎಂದರು.