ವಿಜಯನಗರ: ಕೆಲಸದ ಒತ್ತಡದಿಂದ ಬೇಸತ್ತ ನಗರ ಸಭೆಯ ಬಿಲ್ ಕಲೆಕ್ಟರ್ ಒಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಮೃತರನ್ನು ಮಂಜುನಾಥ್ ಎಂದು ತಿಳಿದುಬಂದಿದೆ. ಮಂಜುನಾಥ್ ಅವರು ಹೊಸ ವರ್ಷದ ಆರಂಭದ ದಿನವೇ ತಮಗೆ ಕೆಲಸದ ಒತ್ತಡದ ಇದೆ ಎಂದು ಹೇಳಿ ಪ್ಲಂಬಿಂಗ್‌ಗೆ ಬಳಸುವ ಗಮ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಮಾರ್ಜ್ ಆದ ಬಳಿಕ ಅವರು ಇಂದು ಮತ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಮೊಬೈಲ್ ನಲ್ಲಿ ಡೆತ್ ನೋಟ್ ಕುರಿತು ಉಲ್ಲೇಖಿಸಿದ್ದರು.
“ನನ್ನ ಸಾವಿಗೆ ನಗರಸಭೆಯ ಆಯುಕ್ತ ಚಂದ್ರಪ್ಪ ಮತ್ತು ಕಂದಾಯ ಅಧಿಕಾರಿ ನಾಗರಾಜ್ ಕಾರಣ. ಕೆಲಸದಿಂದ ಬೇರೆಡೆ ನಿಯೋಜಿಸಲು ಒಂದು ತಿಂಗಳಿಂದ ಹೇಳುತ್ತಿದ್ದರೂ ತೆಗೆಯುತ್ತಿಲ್ಲ. ರಾತ್ರಿ ನಿದ್ದೆ ಬರುತ್ತಿಲ್ಲ, ಅಧಿಕ ಒತ್ತಡ ಇರುವುದರಿಂದ ನಾನು ಸಾವಿಗೆ ಶರಣಾಗಿದ್ದೀನಿ” ಎಂಬ ಸಂದೇಶವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಕಳುಹಿಸಿ ಮಂಜುನಾಥ ಬುಧವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು. ಹಂಪಿ ರಸ್ತೆಯಲ್ಲಿ ಅವರನ್ನು ಪತ್ತೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಂಜುನಾಥ್ ಇಂದು ಮತ್ತೆ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದಲ್ಲಿ ಖಾಸಗಿ ಹೋಂ ಸ್ಟೇ ನಲ್ಲಿ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಹಂಪಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.